ಬಿಜೆಪಿ ಮಣಿಸಲು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್

ಜೆಪಿ ನಗರದಲ್ಲಿರುವ ಕುಮಾರ ಸ್ವಾಮಿ ಅವರ ನಿವಾಸಕ್ಕೆ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದು, ಈ ವೇಳೆ ಉಭಯ ನಾಯಕರು ಸುಮಾರು ಒಂದು ಗಂಟೆ ಕಾಲ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ರಾಜಕೀಯದಲ್ಲಿ ಬದ್ಧ ಎದುರಾಳಿಗಳು ಎಂದೇ ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ಎಚ್. ಡಿ.ಕುಮಾರಸ್ವಾಮಿ ಭೇಟಿ ರಾಜಕೀಯ ವಲಯದಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿದೆ.
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಚಿಸಲಾಗಿರುವ ವಿದ್ಯುತ್ ಖರೀದಿ ಹಗರಣ ಸಂಬಂಧ ಸದನ ಸಮಿತಿಯ ವರದಿ ಅಕ್ಟೋಬರ್ 30ರಂದು ಸಲ್ಲಿಸಬೇಕಿದ್ದು, ಆ ಸಮಿತಿ ಸದಸ್ಯರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಸಹಿ ಪಡೆಯಲು ಶಿವಕುಮಾರ್ ಬಂದಿದ್ದರು ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರರ ಆರೋಗ್ಯ ವಿಚಾರಿಸಿದ್ದು, ಈ ವೇಳೆ ವಿದ್ಯುತ್ ಖರೀದಿ ಅಕ್ರಮದ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಇನ್ನು ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದ ಸದನ ಸಮಿತಿ ಸದಸ್ಯ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅದು ಅಂಗೀಕಾರವಾಗದ ಕಾರಣ ಸದಸ್ಯರಾಗಿ ಮುಂದುವರಿದಿದ್ದರು. ಹೀಗಾಗಿ, ವರದಿ ಸಲ್ಲಿಸಲು ಸಮಿತಿ ಸದಸ್ಯರ ಸಹಿ ಅಗತ್ಯವಾಗಿತ್ತು. ಇದೇ ಕಾರಣಕ್ಕೆ ಡಿಕೆಶಿ ಕುಮಾರಸ್ವಾಮಿ ನಿವಾಸಕ್ಕೆ ಆಗಮಿಸಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗಿ ಮಾಹಿತಿ ನೀಡಿರುವ ಇಂಧನ ಕುಮಾರಸ್ವಾಮಿ ಅವರು, "ವಿದ್ಯುತ್ ಖರೀದಿ ಅಕ್ರಮಗಳನ್ನು ದಾಖಲೆ ಸಮೇತ ಸಂಗ್ರಹಿಸಿ ಎರಡು ತಿಂಗಳ ಹಿಂದೆಯೇ ಸಮಿತಿಗೆ ಸಲ್ಲಿಸಿದ್ದೆ. ಇದರಿಂದ ಸರ್ಕಾರಕ್ಕೆ ಆದ ಸಾವಿರಾರು ಕೋಟಿ ರೂ. ನಷ್ಟದ ಬಗ್ಗೆಯೂ ಅಂಕಿ-ಅಂಶ ನೀಡಿದ್ದೆ. ಈ ಅಂಶಗಳನ್ನೂ ಸೇರಿಸಿ ಅಧಿಕಾರಿಗಳು ಅಂತಿಮ ವರದಿ ಸಿದ್ಧಪಡಿಸಿದ್ದಾರೆಂದು ಶಿವಕುಮಾರ್ ಹೇಳಿದರು. ಅಂತೆಯೇ ಅಂತಿಮ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು ಎಂದು ಹೇಳಿದರು.
Comments