ವಿವಿ ವಿದ್ಯಾರ್ಥಿಗಳ ಕನಸಿಗೆ ಕನ್ನಡಿಯಾದ ಎಚ್ ಡಿ ಕೆ

ಕೆಎಸ್ ಒಯು ನ ಸಾವಿರಾರು ವಿದ್ಯಾರ್ಥಿಗಳ ಕನಸು ಕಮರಿದೆ. ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಲವು ಸಮಸ್ಯೆಗಳಿಂದಾಗಿ ಅದಕ್ಕೆ ಬೀಗ ಜಡಿಯಲು ಉನ್ನತ ಮಟ್ಟದ ತನಿಖಾ ತಂಡ ರಚಿಸಿ ಸದ್ಯ ಆದೇಶ ಹೊರಡಿಸಲಾಗಿದೆ. ಇದಕ್ಕೆ ಬೇಸರ ವ್ಯೆಕ್ತ ಪಡಿಸಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್ಒಯು) ಮತ್ತೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವರು ಪತ್ರ ಬರೆದಿದ್ದಾರೆ. ಮುಕ್ತ ವಿಶ್ವವಿದ್ಯಾಲಯಕ್ಕೆ 2013ರವರೆಗೆ ಮಾನ್ಯತೆ ಇತ್ತು. ಪ್ರತಿ ವರ್ಷ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿತ್ತು. ಆದರೆ, ಮಾನ್ಯತೆ ರದ್ದಾದ ಬಳಿಕ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಉದ್ಯೋಗ ಸೇರಲು ಅಧಿಕೃತ ಪ್ರಮಾಣ ಪತ್ರ ಸಿಗದೆ ಅವರ ಭವಿಷ್ಯ ತೊಂದರೆಗೆ ಸಿಲುಕಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
‘ಕೆಎಸ್ಒಯು ಮುಚ್ಚುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಯ ರಾಯರಡ್ಡಿ ನೀಡಿರುವ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ವಿಶ್ವವಿದ್ಯಾಲಯವನ್ನು ಉಳಿಸುವುದಕ್ಕಿಂತ ಅಲ್ಲಿನ ಹಣವನ್ನು ವಶಕ್ಕೆ ತೆಗೆದುಕೊಳ್ಳುವುದು ಅವರಿಗೆ ಮುಖ್ಯವಾಗಿದೆ. ವಿಶ್ವವಿದ್ಯಾಲಯದ ಖಾತೆಯಲ್ಲಿ ಸುಮಾರು ₹ 600 ಕೋಟಿ ಹಣ ಲಭ್ಯವಿದ್ದು, ಇದನ್ನು ಬೇರೆ ಕಾಲೇಜು, ಕಟ್ಟಡಗಳಿಗೆ ಬಳಸುವುದಕ್ಕೆ ಅನುವಾಗುವಂತೆ ಸಮಿತಿಯನ್ನೂ ರಚಿಸಿದ್ದಾರೆ’ ಎಂದು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ರಾಜ್ಯ ಸರ್ಕಾರದ ಗೊಂದಲಕಾರಿ ನಿಲುವುಗಳಿಂದ ಇಲ್ಲಿನ ಬೋಧಕ, ಬೋಧಕೇತರ ಸಿಬ್ಬಂದಿಯೂ ಅತಂತ್ರರಾಗಿದ್ದಾರೆ. ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕೆಎಸ್ಒಯುಗೆ ಮರಳಿ ಮಾನ್ಯತೆ ನೀಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
Comments