ಪ್ರಜ್ವಲ್ ರೇವಣ್ಣ ಬೇಲೂರಿನಿಂದ ಸ್ಪರ್ಧಿಸೊದು ಕನ್ಫರ್ಮ್
ಈ ಬಾರಿಯ ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಬೇಲೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾನೆ. ಇನ್ನೂ ಒಂದು ಸಾಧ್ಯತೆ ಏನೆಂದರೆ ಮುಂದಿನ ಲೋಕಸಭೆ ಚುನಾವಣೆಗೆ ಯಾರೂ ಸ್ಪರ್ಧಿಸಲು ಮುಂದೆ ಬರದಿದ್ದರೆ ಹಾಸನದಿಂದ ಸ್ಪರ್ಧೆ ಮಾಡುತ್ತಾನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ ಮೊಮ್ಮಗನ ಬಗ್ಗೆ ಹೇಳಿದರು.
ಇಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಗೆ ಸ್ಪಷ್ಟ ಬಹುಮತ ಬಾರದಿದ್ದಲ್ಲಿ ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವ ಮಾತಿಲ್ಲ. ವಿಪಕ್ಷದಲ್ಲಿ ಕೂರುತ್ತೇವೆ ವಿನಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.ಶ್ರೀನಿವಾಸ ಪ್ರಸಾದ್ ಗೆ ನಂಜನಗೂಡು ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಸಲಹೆ ಮಾಡಿದ್ದೆ ಎಂದ ದೇವೇಗೌಡರು, ಸಿ.ಪಿ.ಯೋಗೇಶ್ವರ್ ಜೆಡಿಎಸ್ ನ ಸೇರುತ್ತಾರೆ ಎಂಬ ಸುದ್ದಿ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಪಕ್ಷಕ್ಕೆ ಶಕ್ತಿ ತುಂಬುವುದಾದರೆ ಏಕೆ ಬೇಡ ಎನ್ನಲಿ? ಆತ ನಟ. ಅವನ ಚರಿಷ್ಮಾದಿಂದ ಪಕ್ಷಕ್ಕೆ ಅನುಕೂಲ ಅನ್ನೋದಾದರೆ ಏಕೆ ಬಳಸಿಕೊಳ್ಳಬಾರದು ಎಂದು ಪ್ರಶ್ನೆ ಮಾಡಿದರು.ಇನ್ನು ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿ, ಎರಡೂ ರಾಜ್ಯಕ್ಕೂ ಒಟ್ಟಿಗೆ ಚುನಾವಣೆ ಆಗುತ್ತದೆ ಅಂದುಕೊಂಡಿದ್ದೆವು. ಆದರೆ ಪ್ರಧಾನಿಗಳು ಪ್ರಯೋಗ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಹಾಗೂ ಮತದಾನದ ಮಧ್ಯೆ ಒಂಬತ್ತು ದಿನದ ಕಾಲಾವಕಾಶ ಅಷ್ಟೇ ಇದೆ. ಜೆಡಿಎಸ್ ನಂಥ ಪ್ರಾದೇಶಿಕ ಪಕ್ಷಗಳಿಗೆ ಇದು ಎಚ್ಚರಿಕೆ ಎಂದು ಹೇಳಿದರು.
Comments