ಎಚ್ ಡಿಕೆಯ ಪ್ರತಿಯಾಗಿ ಮಗ ನಿಖಿಲ್ ಜೆಡಿಎಸ್ ಚುನಾವಣೆಯ ಪ್ರಚಾರದಲ್ಲಿ ಭಾಗಿ
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಮಾಡುವುದು ಸರ್ವೇ ಸಾಮಾನ್ಯ. ಅದೇ ರೀತಿ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆ ಎಚ್ ಡಿ ಕೆ ಪುತ್ರ ನಿಖಿಲ್ ಗೌಡ ರವರು ಚುನಾವಣಾ ಪ್ರಚಾರದ ಸಾರಥ್ಯ ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು ಎಚ್ ಡಿ ಕುಮಾರಸ್ವಾಮಿಯವರು ಶಸ್ತ್ರ ಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಿಖಿಲ್ ತಂದೆಯ ಸ್ಥಾನವನ್ನು ತುಂಬಲಿದ್ದಾರೆ. ಈ ಬಗ್ಗೆ ಮಾತನಾಡಿದ ನಿಖಿಲ್ ರವರು ಹೇಳಿದ್ದು ಹೀಗೆ , ನಾನು ಶಾಸಕ ಅಥವಾ ಸಂಸದನಾಗಬೇಕೆಂಬ ಆಸೆಯಿಂದ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಿಖಿಲ್ ಕುಮಾರ್ ನವೆಂಬರ್ 1ರಿಂದ ಹಳೇಯ ಮೈಸೂರು ಭಾಗದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ, ಅಷ್ಟರೊಳಗೆ ತಾವು ಕೈಗೊಂಡಿರುವ ಸಿನಿಮಾ ಕಮಿಟ್ ಮೆಂಟ್ ಗಳನ್ನು ಪೂರೈಸಲಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿರುವ ನಿಖಿಲ್ ಆದಷ್ಟು ಶೀಘ್ರವೇ ಶೂಟಿಂಗ್ ಮುಗಿಸಲು ನಿರ್ಧರಿಸಿದ್ದಾರೆ. ಮುಂದಿನ ವಾರ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿರುವ ನಿಖಿಲ್, ಜನತೆ ನನ್ನ ತಂದೆ ಕುಮಾರ ಸ್ವಾಮಿ ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಅವರು ಪ್ರಚಾರಕ್ಕೆ ಬರುವವರೆಗೂ ಅವರ ಸ್ಥಾನ ತುಂಬಲು ನಾನು ಭಾಗವಹಿಸುತ್ತಿದ್ದೇನೆ.
ನನ್ನ ಮುಂದೆಯೂ ಕೆಲವು ಐಡಿಯಾಗಳಿವೆ, ಅದನ್ನು ಜಾರಿಗೆ ತರಲು ಹಾಗೂ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನನಗನ್ನಿಸುತ್ತಿದೆ, ಇದರ ಹಿಂದೆ ಯಾವ ಬೇರೆ ಉದ್ದೇಶವೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.ತಮ್ಮ ತಂದೆ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜನಪ್ರಿಯ ಯೋಜನೆ ಹಾಗೂ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲಾಗುವುದು, ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ಪರ್ಧಿಸಿ ಕಳೆದ 10 ವರ್ಷಗಳಿಂದ ಜೆಡಿಎಸ್ ವಿರೋಧ ಪಕ್ಷದಲ್ಲಿ ಕುಳಿತಿದೆ, ಹೀಗಾಗಿ ನನ್ನ ತಂದೆಯ ಮುಂದಿನ 5 ವರ್ಷಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರಿಗೆ ಕೇಳುವುದಾಗಿ ಹೇಳಿದ್ದಾರೆ. ಮುಂದಿನ ಫೆಬ್ರವರಿಯಿಂದ ಏಪ್ರಿಲ್ ವರೆಗೂ ನಿಖಿಲ್ ಯಾವುದೇ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುವುದಿಲ್ಲ, ರಾಮನಗರ, ಮಂಡ್ಯ, ಮೈಸೂರು ಮತ್ತು ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಮಡಿಕೇರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ, ಹಾಗೆಯೇ ಇದೇ ವೇಳೆ ಕುಮಾರ ಸ್ವಾಮಿ ಉತ್ತರ ಕರ್ನಾಟಕ ಜಿಲ್ಲೆಗಳ ಕಡೆ ಗಮನ ವಹಿಸಲಿದ್ದಾರೆ.
Comments