ಜಮೀರ್ ಅಹಮದ್ ವಿರುದ್ಧ ದೇವೇಗೌಡರು ವ್ಯಂಗ್ಯ
ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ನಲ್ಲಿ ಸಿಎಂ ಆಗಬಹುದು ಎಂದು ವ್ಯಂಗ್ಯವಾಡಿದ್ದಾರೆ....
ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ಜಮೀರ್ ಅಹಮದ್ ಒಬ್ಬ ಮುಸ್ಲಿಂ ಮಾಸ್ ಲೀಡರ್ ಅಷ್ಟೆ, ಕುಮಾರಸ್ವಾಮಿ ಪಾಪ ಅಂತ ಅವರನ್ನು ಮಂತ್ರಿ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಅಲ್ಲಿ ಅವರು ಮುಖ್ಯಮಂತ್ರಿ ಆಗಬಹುದೇನೋ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ದೇವೇಗೌಡರು, ನೈಸ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವೀರಾವೇಶದಲ್ಲಿ ಮಾತನಾಡಿದ್ದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೂಡ ಮಾತನಾಡಿದ್ದರು. ಆದರೂ ನೈಸ್ ವರದಿ ಸದನ ಸಮಿತಿಯಲ್ಲಿ ಜಾರಿಯಾಗಿಲ್ಲ. ನೈಸ್ ಎನ್ನುವುದು ಬೇನಾಮಿ ಕಂಪನಿ. ರಸ್ತೆ ಮುಗಿದ ಬಳಿಕ ಟೋಲ್ ಸಂಗ್ರಹಿಸಬೇಕು ಎಂಬ ನಿಯಮವಿದೆ. ಆದರೆ ಇವರು ಎಲ್ಲೆಡೆ ಟೋಲ್ ಸಂಗ್ರಹಿಸುತ್ತಿದ್ದಾರೆ ಎಂದರು.
ಟೋಲ್ ಟ್ಯಾಕ್ಸ್ ದಿನಕ್ಕೆ ಒಂದೂವರೆ ಕೋಟಿ ಹಣ ಬರುತ್ತಿದೆ. ಆದರೆ ಏನೂ ಮಾಡಿಲ್ಲ, ನಾನು ಬೀದಿಗಿಳಿದು ರಸ್ತೆಯಲ್ಲಿ ಹೋರಾಟ ಮಾಡಿದ್ದೇನೆ. ನೈಸ್ ಅವ್ಯವಹಾರದ ಬಗ್ಗೆ ಸೋನಿಯಾಗಾಂಧಿಗೂ ಪತ್ರ ಬರೆದಿದ್ದೇನೆ. ಈಗಿನ ಪ್ರಧಾನಿಯನ್ನೂ ಭೇಟಿ ಮಾಡಿದ್ದೇನೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಸಿಎಂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Comments