ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಿವಿಮಾತು
ಹಾಸನ: ಜಿಲ್ಲೆಯಲ್ಲಿ ಈ ಹಿಂದಿನ ಬರ ಹಾಗೂ ಆ ನಂತರ ನಿರಂತರವಾಗಿ ಸುರಿದ ಮಳೆ ಮತ್ತು ಕೀಟ ಬಾದೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆ ಬಗೆಹರಿಸಬೇಕು, ಅದಕ್ಕಾಗಿ ಕೃಷಿ ಮತ್ತು ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು ನಿರ್ದೇಶನ ನೀಡಿದರು....
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರೈತರಿಗೆ ಅಗತ್ಯವಿರುವ ಮಾಹಿತಿ, ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕಾಲಕಾಲಕ್ಕೆ ಪೂರೈಸಿ ಎಂದರು.
ಶಾಸಕರಾದ ಹೆಚ್.ಡಿ.ರೇವಣ್ಣ ಮತ್ತು ಕೆ.ಎಂ.ಶಿವಲಿಂಗೇಗೌಡ ಅವರು ಹಾಗೂ ಸಿ.ಎನ್.ಬಾಲಕೃಷ್ಣ ಅವರು ಸಭೆಯಲ್ಲಿ ಮಾತನಾಡಿ ಮುಂಗಾರು ವೈಫಲ್ಯ ಹಾಗೂ ಹಿಂಗಾರಿನಲ್ಲಿ ರಾಗಿ ಬೆಳೆಗೆ ಕಂಡು ಬಂದಿರುವ ವಿಚಿತ್ರ ಕೀಟ ಭಾದೆ ನಿಯಂತ್ರಣದ ಬಗ್ಗೆ ಕೃಷಿ ಇಲಾಖೆ ಏನಾದರೂ ಪರಿಹಾರ ಕಂಡು ಹಿಡಿಯಬೇಕು ಹತಾಶರಾಗಿರುವ ರೈತರಿಗೆ ಆತ್ಮ ವಿಶ್ವಾಸ ತುಂಬಬೇಕು ಎಂದು ಒತ್ತಾಯಿಸಿದರು.
"ಬಿತ್ತನೆ ಕಾಲವಾದ ಜೂನ್ ತಿಂಗಳಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯ ತೀವ್ರ ಕೊರತೆಯಾಗಿತ್ತು. ಈಗ ಹಿಂಗಾರಿನಲ್ಲಿ ಮಳೆ ಸುರಿದರೂ ರೈತರಿಗೆ ಅನುಕೂಲವಾಗದಂತಹ ಪರಿಸ್ಥಿತಿ ಉಂಟಾಗುತ್ತಿರುವುದು ಬೇಸರದ ಸಂಗತಿ. ಇನ್ನಷ್ಟು ತೊಂದರೆ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ" ಎಂದು ದೇವೇಗೌಡರು ಹೇಳಿದರು. ಕುಡಿಯುವ ನೀರಿನ ಪೂರೈಕೆ ಬಿಲ್ ಪಾವತಿ ಬಗ್ಗೆ ಹಲವು ಬಾರಿ ಚರ್ಚೆಯಾಗಿದೆ. ಇದನ್ನು ಶೀಘ್ರ ಬಗೆಹರಿಸಿ ಎಂದರು. ಇದೇ ವೇಳೆ ಮಾಜಿ ಪ್ರಧಾನಿಯವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನದ ಪ್ರಗತಿ ವಿವರಗಳನ್ನು ಅಧಿಕಾರಿಗಳಿಂದ ಪಡೆದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿಯವರು ಕುಡಿಯುವ ನೀರು ಪೂರೈಕೆ, ಬೆಳೆ ಕಟಾವು ಸಮೀಕ್ಷೆಗಳ ಬಗ್ಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
Comments