ರ್ಯಾಲೀಯಿಂದ ಕಾಂಗ್ರೆಸ್ ಗೆ ನಡುಕ ಹುಟ್ಟಿಸಲು ಸಿದ್ದರಾಗಿ : ಷಾ ಕಡಕ್ ಸೂಚನೆ
ರಾಜ್ಯ ಸರ್ಕಾರದ ವಿರುದ್ಧ ನವೆಂಬರ್ 2ರಂದು ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯನ್ನು ಯಶಸ್ವಿಯಾಗಿ ನಡೆಸುವಂತೆ ಕೇಂದ್ರ ನಾಯಕರು ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ಕೊಟ್ಟಿದ್ದಾರೆ. ಸರ್ಕಾರದ ವಿರುದ್ಧ ಇದು ರಣಕಹಳೆ ಮೊಳಗಿಸುವ ಕಾರ್ಯಕ್ರಮವಾಗಲಿರುವುದರಿಂದ ಪರಿವರ್ತನಾ ಯಾತ್ರೆಗೆ ಯಾವುದೇ ರೀತಿ ಅಡಚಣೆ ಉಂಟಾಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ದೇಶಿಸಿದ್ದಾರೆ.
ಪರಿವರ್ತನಾ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಆಗಮಿಸಲಿರುವುದರಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಸರ್ಕಾರದ ವಿರುದ್ಧ ಅಂದೇ ಚುನಾವಣೆಗೆ ಕಹಳೆ ಮೊಳಗಿಸಬೇಕೆ ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೇ ಖುದ್ದು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ಅವರ ಜತೆ ರಾಜ್ಯ ಘಟಕದ ನಾಯಕರಾದ ಅಶೋಕ್, ಲಿಂಬಾವಳಿ, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ಪಕ್ಷದ ಪದಾಧಿಕಾರಿಗಳು ಕೈ ಜೋಡಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಬೈಕ್: ನವೆಂಬರ್ 2ರಂದು ನಡೆಯಲಿರುವ ಪರಿವರ್ತನಾ ಯಾತ್ರೆಗೆ ರಾಜ್ಯದ ಸುಮಾರು 55 ಸಾವಿರ ಬೂತ್ ಸಮಿತಿಗಳನ್ನು ರಚನೆ ಮಾಡಲಾಗಿದೆ. ಪ್ರತಿ ಬೂತ್‍ನಿಂದ ಮೂವರು ಕಾರ್ಯಕರ್ತರನ್ನು ಕಡ್ಡಾಯವಾಗಿ ಕರೆತರುವಂತೆ ಸೂಚಿಸಲಾಗಿದೆ.
55 ಸಾವಿರ ಬೂತ್ ಸಮಿತಿಗಳಿಂದ 1,65,000 ದ್ವಿಚಕ್ರ ವಾಹನಗಳು ಆಗಮಿಸಲಿವೆ. ಇದರಲ್ಲಿ 1 ಬೈಕ್‍ಗೆ ಇಬ್ಬರಂತೆ ಅಂದರೆ ಸರಿಸುಮಾರು 3,55,000 ಬೂತ್ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಸೇರಿದಂತೆ ಒಟ್ಟು 5 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಜಮಾಯಿಸಬೇಕೆಂದು ತಾಕೀತು ಮಾಡಿದೆ. ಕೇಂದ್ರ ವರಿಷ್ಠರಿಂದಲೇ ಸೂಚನೆ ಬಂದಿರುವ ಕಾರಣ ಯಡಿಯೂರಪ್ಪ ಈಗಾಗಲೇ ತಮ್ಮ ಕೆಲವು ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಪರಿವರ್ತನಾ ಯಾತ್ರೆಗೆ ಕೈಗೊಳ್ಳಬೇಕಾದ ಸಕಲ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ.
Comments