ಚಾಮರಾಜಪೇಟೆಯಲ್ಲಿ JDS ಅಮಾನತುಗೊಂಡಿರುವ ಶಾಸಕ ಜಮೀರ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಫಿಕ್ಸ್
ಶಾಸಕ ಜಮೀರ್ ಅಹಮ್ಮದ್ ರನ್ನು ಹಣಿಯಲು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ದೇವೇಗೌಡರು ಇಮ್ರಾನ್ ಪಾಷ ಅವರನ್ನು ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ....
ಮಹಾಲಯ ಅಮಾವಾಸ್ಯೆ ಪೂಜೆ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷನನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿ ಚಾಮರಾಜಪೇಟೆಯಿಂದ ಜೆಡಿಎಸ್ ಟಿಕೆಟ್ ಖಚಿತಪಡಿಸಿದ್ದಾರೆ. ಇದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡ ಸಮ್ಮತಿ ಸೂಚಿಸಿದ್ದು, ಚಾಮರಾಜಪೇಟೆಯಲ್ಲಿ ಜಮೀರ್ ಸೋಲಿಸಿ ಇಮ್ರಾನ್‍ನನ್ನು ಗೆಲ್ಲಿಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪೂಜೆ ನೆಪದಲ್ಲಿ ಮೂರು ಗಂಟೆಗಳ ಕಾಲ ದೇವೇಗೌಡರು, ಇಮ್ರಾನ್ ಪಾಷ ಚರ್ಚೆ ನಡೆಸಿದ್ದು, ಕುತೂಹಲ ಕೆರಳಿಸಿದೆ. ಕಳೆದ 19ರಂದು ದೇವೇಗೌಡರು ಇಮ್ರಾನ್ ಅವರಿಗೆ ಟಿಕೆಟ್ ಖಚಿತಪಡಿಸಿದ್ದರಿಂದ ಈ ಕ್ಷೇತ್ರದಾದ್ಯಂತ ಇಮ್ರಾನ್ ಅವರ ಓಡಾಟ ಹೆಚ್ಚಾಗಿದೆ.
ಬಿನ್ನಿಮಿಲ್, ಚಾಮರಾಜಪೇಟೆ, ಸಿಟಿ ಮಾರ್ಕೆಟ್, ಆಜಾದ್‍ನಗರ, ಜೆಜೆನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸರಣಿ ಸಭೆ ನಡೆಸುತ್ತಿರುವ ಇಮ್ರಾನ್, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲಿಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಜಮೀರ್ ಇಲ್ಲದಿದ್ದರೇನು ನಾನಿದ್ದೇನೆ, ನಮ್ಮ ಗೌಡರಿದ್ದಾರೆ ಎಂದು ಕಾರ್ಯಕರ್ತರಿಗೆ ವಿಶ್ವಾಸ ತುಂಬುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಮ್ರಾನ್ ಪರ ದೇವೇಗೌಡ ಹಾಗೂ ಕುಮಾರಸ್ವಾಮಿ ಚಾಮರಾಜಪೇಟೆಯಲ್ಲಿ ದೊಡ್ಡ ಸಮಾವೇಶ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ಇಮ್ರಾನ್ ಅವರನ್ನು ಗೆಲ್ಲಿಸಲು ಕುಮಾರಸ್ವಾಮಿ ಅವರಿಂದ ಪಾದಯಾತ್ರೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿರುವುದರಿಂದ ಜಮೀರ್ ಅವರಿಗೆ ಚಾಮರಾಜಪೇಟೆಯಲ್ಲಿ ನಡುಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
Comments