ಕುಮಾರಣ್ಣನ ಸಹಾಯ ಮನೋಭಾವನೆಯನ್ನ ಮೆಚ್ಚಿ ತನ್ನಗೆ ಸಹಾಯ ಮಾಡುವಂತೆ ಕೋರಿ ಪತ್ರ ಬರೆದ ಬಡ ಯುವಕ

ಬಡತನದಿಂದ ಬೆಂದಿರುವ ಯುವಕನೊಬ್ಬ ತನ್ನ ಕುಟುಂಬದ ಕಷ್ಟಗಳಿಗೆ ಸಹಾಯ ಕೋರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾನೆಹೌದು, ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಯುವಕ ಗುರುಸಿದ್ದಪ್ಪ ತೋಟಗೇರ ಎಂಬಾತನೇ 'ಆತ್ಮಹತ್ಯೆಗೂ ಮುನ್ನ ನಿಮಗೊಂದು ಪತ್ರ' ಎಂಬ ಶೀರ್ಷಿಕೆಯಡಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ನೆರವಿಗೆ ಕೋರಿದ್ದಾನೆ.
ಒಂದು ಕಣ್ಣು ಕಾಣದ ಗುರುಸಿದ್ದಪ್ಪ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಕುಟುಂಬದ ಜವಾಬ್ದಾರಿ ಹೊತ್ತು ಜೀವನ ನಡೆಸುತ್ತಿದ್ದಾನೆ. ಪಿಯುಸಿ ಓದುತ್ತಲೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಬರುವ 7 ಸಾವಿರ ಸಂಬಳದಲ್ಲಿ ಈತ ತನ್ನ ಕುಟುಂಬ ನಡೆಸುತ್ತಿದ್ದಾನೆ. ಜೊತೆಗೆ ಇದೆಲ್ಲದರ ನಡುವೆ ಸಾಲ ಮಾಡಿ ಅಕ್ಕನ ಮದುವೆ ಮಾಡಿದ್ದಾನೆ. ಈ ಮಧ್ಯೆ ತಾಯಿಯ ಕಣ್ಣು ಪೊರೆ ಸಮಸ್ಯೆಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ತಂಗಿಯ ಮದುವೆ ಜವಾಬ್ದಾರಿ ಕಾಡುತ್ತಿದೆ.
ಇದೆಲ್ಲದರಿಂದ ಬೇಸತ್ತಿರುವ ಗುರುಸಿದ್ದಪ್ಪ ಟಿವಿ, ಪತ್ರಿಕೆಗಳಲ್ಲಿ ಕುಮಾರಸ್ವಾಮಿ ಅವರ ಸಹಾಯ ಮನೋಭಾನೆಯನ್ನ ಕಂಡು ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅದು ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ತನ್ನ ಕುಟುಂಬದ ಕಷ್ಟಗಳಿಗೆ ಗುರುಸಿದ್ದಪ್ಪ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾನೆ.
ಅಕ್ಕನ ಮದುವೆಗೆ ಸಂಬಂಧಿಕರ ಹಾಗೂ ಸ್ನೇಹಿತರ ಹತ್ತಿರ ಸಾಲ ಮಾಡಿಕೊಂಡಿದ್ದೇನೆ. ಈಗ ಅವರ ಸಾಲ ತೀರಿಸಬೇಕಾದ ಜವಾಬ್ದಾರಿ ನನ್ನ ಮೇಲಿದೆ. ತಾಯಿಗೆ ಕಣ್ಣು ಕಾಣಿಸುವುದಿಲ್ಲ. ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ನನ್ನದೂ ಒಂದು ಕಣ್ಣು ಕಾಣುವುದಿಲ್ಲ. ಇರುವ ಒಂದೇ ಕಣ್ಣು ನನಗಾಸರೆ. ಹೀಗಾಗಿ ನಮಗೇನಾದರೂ ಆರ್ಥಿಕ ಸಹಾಯ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಗುರುಶಿದ್ದಪ್ಪ ತಿಳಿಸಿದ್ದಾನೆ.
Comments