ಅರುಣ್ ಜೇಟ್ಲಿಗೆ ಪತ್ರ ಬರೆದ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಐಬಿಪಿಎಸ್)ಯು ಕರ್ನಾಟಕ ಸೇರಿದಂತೆ ದೇಶದ ಇತರ ಗ್ರಾಮೀಣ ಭಾಗದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ. ಆದರೆ, ಕೇಂದ್ರ ಸರಕಾರವು ಇತ್ತೀಚೆಗೆ ಸ್ಥಳೀಯ ಭಾಷೆಗಳಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯುವ ವಿಧಾನವನ್ನು ಬದಲಾಯಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿಗೆ ಪತ್ರ ಬರೆದಿರುವ ಅವರು, ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರೆ ಗ್ರಾಮೀಣ ಪ್ರದೇಶದ ನೂರಾರು ಯುವಕರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರವು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿದೆ. ಇದರಿಂದಾಗಿ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದಿರುವಂತಹ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾರಕವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಐಬಿಪಿಎಸ್ ಪರೀಕ್ಷೆ ವಿಧಾನದಲ್ಲಿನ ಬದಲಾವಣೆಯು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಆಯಾ ರಾಜ್ಯಗಳ ಭಾಷಾ ಹಕ್ಕು ಹಾಗೂ ಪ್ರಾದೇಶಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಕೇಂದ್ರ ಸರಕಾರದ ಈ ನಿರ್ಧಾರವು ಹಿಂದಿ ಭಾಷಿಕರಿಗೆ ಉತ್ತೇಜನ ನೀಡಿದಂತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಆದುದರಿಂದ, ಕೇಂದ್ರ ಸರಕಾರವು ಈ ಹಿಂದೆ ಇದ್ದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ವಿಧಾನವನ್ನು ಐಬಿಪಿಎಸ್ ನಲ್ಲಿ ಅಳವಡಿಸಬೇಕು. ಇದರಿಂದ, ಉದ್ಯೋಗಾವಕಾಶಗಳಲ್ಲಿ ಸಮಾಜ ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
Comments