ಮಹಾಮಸ್ತಕಾಭಿಷೇಕ ಯಶಸ್ವಿಯಾಗಿಸಲು ದೇವೇಗೌಡರು ಪಣ ತೊಟ್ಟಿದ್ದಾರೆ.
ಮಹಾಮಸ್ತಕಾಭಿಷೇಕಕ್ಕೆ ಯಾವುದೇ ಕಪ್ಪುಚುಕ್ಕೆ ಬಾರದಂತೆ, ಸ್ವಾಮೀಜಿ ಮನಸ್ಸಿಗೆ ಬೇಸರವಾಗದಂತೆ ಯಶಸ್ವಿಯಾಗಿ ಮಹೋತ್ಸವ ನೆರವೇರಿಸಲು ಸಂಸತ್ ಸದಸ್ಯರಾಗಿ ಕೇಂದ್ರ ಸರ್ಕಾರದಿಂದಾಗಬೇಕಾದ ಕೆಲಸ ಮಾಡಲು ದೇವೇಗೌಡರು ಸಿದ್ಧರಿದ್ದಾರೆ ಎಂದು ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದರು…
ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಅವರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಆಗಬೇಕಾದ ರಸ್ತೆಗಳು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಕೆಲಸ ಹಾಗೂ ಇನ್ನಿತರ ಕಾಮಗಾರಿಗಳನ್ನು ಸಂಸದನಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ ಎಂದರು. 2006 ರ ಮಹೋತ್ಸವಕ್ಕೆ ಕೇಂದ್ರ ಸರ್ಕಾರ 250 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು ಹಾಗೂ ಹಾಸನ-ಬೆಂಗಳೂರು ಚತುಷ್ಪಥ ರಸ್ತೆ ನಿರ್ಮಾಣಕ್ಕೆ 2700 ಕೋಟಿ ನೀಡಲಾಗಿತ್ತು.
ಅದೇ ರೀತಿ ಈ ಬಾರಿ ದೇವೇಗೌಡರು ನಿತಿನ್ ಗಡ್ಕರಿಯವರಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿ ಹಾಗೂ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದಂತೆ ಈಗಾಗಲೇ 100 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮತ್ತೆ 200 ಕೋಟಿ ಬಿಡುಗಡೆ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಯವರೂ ಪತ್ರ ಬರೆದಿದ್ದಾರೆ ಎಂದು ರೇವಣ್ಣ ತಿಳಿಸಿದರು.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ರಾಜ್ಯದ ಪ್ರತಿನಿಧಿಯಾಗಿ ದೇವೇಗೌಡರು ಮಹಾಮಸ್ತಕಾಭಿಷೇಕದ ಕೆಲಸ ಕಾರ್ಯಗಳ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಿಸುತ್ತಿರುವುದು ಶ್ಲಾಘನೀಯ ಎಂದರು.
Comments