ಬಿಜೆಪಿ ಜೊತೆ ಕೈಜೋಡಿಸಲು ಜೆಡಿಎಸ್ ನಿರ್ಧಾರ !
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಮೈತ್ರಿಯೊಂದಿಗೆ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಂಚಿಕೊಂಡಿದ್ದ ಜೆಡಿಎಸ್ ಈಗ ಬಿಜೆಪಿ ಜೊತೆ ಕೈ ಜೋಡಿಸಲು ನಿರ್ಧರಿಸಿದ್ದು …
ಈ ಬಾರಿ ಮೇಯರ್ ಸ್ಥಾನ ತಮಗೆ ನೀಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಬಿಬಿಎಂಪಿಗೆ ಸಾಕಷ್ಟು ಅನುದಾನ ಹರಿದುಬಂದರೂ ಕೂಡ ಯಾವುದೇ ಜನಪ್ರಿಯ ಯೋಜನೆಗಳು ಜಾರಿಯಾಗಿಲ್ಲ. ಇಲ್ಲಿಯವರೆಗೂ ನಾಮಕಾವಸ್ತೆಗೆ ಮೈತ್ರಿ ಮಾಡಿಕೊಂಡು ಭ್ರಷ್ಟಾಚಾರ ನಡೆಸಿ ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಹಣ ಲೂಟಿ ಮಾಡಿದೆ. ಬೆಂಗಳೂರು ಜನತೆ ಹಿತದೃಷ್ಟಿಗಾಗಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಕೊಳ್ಳಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆಪಿನಗರದ ನಿವಾಸದಲ್ಲಿಂದು ನಡೆದ ಸಭೆಯಲ್ಲಿ ತಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ದೊರಕಬೇಕೆಂಬ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಇದುವರೆಗೂ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ನೀಡಲಾಗಿತ್ತು. ಮುಂದಿನ ಅವಧಿಗೆ ಮೇಯರ್ ಸ್ಥಾನ ಜೆಡಿಎಸ್‍ಗೆ ನೀಡುವಂತೆ ಅದು ಮಿತ್ರ ಪಕ್ಷವನ್ನು ಒತ್ತಾಯಿಸಿದೆ. ಈಗಾಗಲೇ ಜೆಡಿಎಸ್ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು.ಆದರೆ ಕಾಂಗ್ರೆಸ್‍ನ ಆಡಳಿತದ ಬಗ್ಗೆ ಅಸಮಾಧಾನವಿದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಅಭಿವೃದ್ದಿಗಾಗಿ ಜೆಡಿಎಸ್ ಪಕ್ಷ ಕಾಂಗ್ರೆಸ್‍ಗೆ ಕೆಲವು ಸಲಹೆಸೂಚನೆ ನೀಡಿತ್ತು. ಆದರೆ ಅದ್ಯಾವುದನ್ನೂ ಪಾಲಿಸದೆ ಒಮ್ಮತದ ತೀರ್ಮಾನ ಕೈಗೊಂಡು ಏಕಪಕ್ಷೀಯವಾಗಿ ವರ್ತಿಸಿದೆ ಎಂದಿದ್ದಾರೆ. ಇದೇ 28ರಂದು ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಬೇಕೊ ಅಥವಾ ಬಿಜೆಪಿ ಜೊತೆ ಕೈ ಜೋಡಿಸಬೇಕೊ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ.
Comments