ಪ್ರಚಾರಕ್ಕೆ ಸಿದ್ಧವಾಗುತ್ತಿದೆ ಕುಮಾರಸ್ವಾಮಿ ಬಸ್
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಉಳಿದೆಲ್ಲ ಪಕ್ಷಗಳಿಗಿಂತ ಜೆಡಿಎಸ್ ವಿಭಿನ್ನವಾಗಿ ಸಿದ್ಧತೆ ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸಲಿರುವ ಪ್ರಚಾರಕ್ಕೆ ಹೈಟೆಕ್ ಆದ ವಿಶೇಷ ವಾಹನವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಮೋಹಿದ್ ಅಲ್ತಾಫ್ ಅವರು ನೂತನ ಬಸ್ ನಿರ್ಮಾಣದಉಸ್ತುವಾರಿ ವಹಿಸಿಕೊಂಡಿದ್ದಾರೆ.
ಹೇಗಿರಲಿದೆ ಬಸ್?: ಅಶೋಕ ಲೇಲ್ಯಾಂಡ್ನ 30 ಆಸನಗಳ ಬಸನ್ನು ಚುನಾವಣಾ ಪ್ರಚಾರಕ್ಕೆ ಬೇಕಾದ ವಾಹನದ ರೀತಿಯಲ್ಲಿ ಹೈಟೆಕ್ ಆದ ರೀತಿಯಲ್ಲಿ ವಿವಿಧ ಸೌಲಭ್ಯಗಳೊಂದಿಗೆ ಸಿದ್ದಪಡಿಲಾಗುತ್ತಿದೆ. ಇದರಲ್ಲಿ ಐದು ಆಸನಗಳು ಮಾತ್ರ ಇರುತ್ತವೆ. ಕುಮಾರಸ್ವಾಮಿಗೆ ಕೂರಲು ಪ್ರತ್ಯೇಕವಾದ ಆಸನ ಇರುತ್ತದೆ. ಲಿಫ್ಟ್ ಇದ್ದು ಅದರ ಮೂಲಕ ಮೇಲೆ ನಿಂತು ಭಾಷಣ ಮಾಡಲು ಬೇಕಾದ ಮೈಕ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಅದರಲ್ಲಿ ಕೆಫೆಟೇರಿಯ ಸಹ ಇದೆ. ವಾಹನದ ಹೊರ ಭಾಗದಲ್ಲಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿ ಆಗಿರುವ ಜನಪರ ಸರ್ಕಾರದ ಮಾಹಿತಿಯ ಚಿತ್ರಗಳಿರುತ್ತವೆ.
ಎಲ್ಲಿ ಸಿದ್ದವಾಗುತ್ತಿದೆ?: ಈ ವಾಹನವನ್ನು ಸಿದ್ಧ ಮಾಡುವುದಕ್ಕೆ ಒಂದು ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ಖರ್ಚಾಗುತ್ತಿದೆ. ತಮಿಳುನಾಡಿನ ಕರೂರು ಬಸ್ಗಳ ಬಾಡಿ ಬಿಲ್ಡಿಂಗ್ ಉದ್ದಿಮೆಗೆ ಹೆಸರುವಾಸಿಯಾಗಿದ್ದು, ಕುಮಾರಸ್ವಾಮಿ ಅವರ ವಿಶೇಷ ವಾಹನ ಅಲ್ಲಿಯೇ ಸಿದ್ದವಾಗುತ್ತಿದೆ. ಒಂದು ತಿಂಗಳಿನಲ್ಲಿ ವಾಹನ ಸಿದ್ದವಾಗಿ ಬೆಂಗಳೂರಿಗೆ ಬರಲಿದೆ.
ಬಹುತೇಕ ದೀಪಾವಳಿಯ ವೇಳೆಗೆ ಈ ವಾಹನದಲ್ಲಿ ಕುಮಾರಸ್ವಾಮಿ ಪ್ರಚಾರ ಆರಂಭಿಸಲಿದ್ದಾರೆ. ವಾಹನ ಬಂದ ನಂತರವೇ ವಿಶೇಷಗಳ ಬಗ್ಗೆ ಮಾಹಿತಿ ನೀಡಲಾ ಗುತ್ತದೆ ಎಂದು ಉಸ್ತುವಾರಿ ಹೊತ್ತಿರುವ ಸೈಯದ್ ಮೋಹಿದ್ ಅಲ್ತಾಫ ‘ವಿಜಯವಾಣಿ’ಗೆ ತಿಳಿಸಿದರು.
ಎರಡು ಹೆಲಿಕಾಪ್ಟರ್ ಬಾಡಿಗೆಗೆ
2 ಹೆಲಿಕಾಪ್ಟರ್ಗಳನ್ನು ಬಾಡಿಗೆಗೆ ಪಡೆಯಲು ಜೆಡಿಎಸ್ ನಿರ್ಧರಿಸಿದೆ. ಕುಮಾರಸ್ವಾಮಿ ವಿಶೇಷ ವಾಹನದ ಜತೆಗೆ ಹೆಲಿಕಾಪ್ಟರ್ ಸಹ ಬಳಕೆ ಮಾಡಲಿದ್ದಾರೆ. ಎಚ್.ಡಿ. ದೇವೇಗೌಡರು ಹೆಚ್ಚಾಗಿ ಹೆಲಿಕಾಪ್ಟರ್ ಬಳಕೆಗೆ ನಿರ್ಧರಿಸಿದ್ದಾರೆ.
Comments