ಒಗ್ಗಟ್ಟಾಗಿದರೆ 125 ಕ್ಷೇತ್ರ ಗೆಲ್ಲುವುದೇನೂ ದೊಡ್ಡ ವಿಷಯವಲ್ಲ : ಎಚ್.ಡಿ.ಡಿ
ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮುಂಬರುವ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 125 ಸ್ಥಾನಗಳನ್ನು ಗೆಲ್ಲುವುದು ದೊಡ್ಡ ಕೆಲಸವೇನಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ಇಲ್ಲಿನ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಹಿರೇಮಠದ ಆವರಣದಲ್ಲಿ ನಿನ್ನೆ ಸಂಜೆ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಗೌಡರು, ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ಈ ಬಾರಿ ಐದು ಸ್ಥಾನಗಳನ್ನು ಗೆಲ್ಲಲೇಬೇಕು ಎಂದರು.
ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ನನ್ನ ರಾಜಕೀಯ ಬದುಕಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ನೋವು ಉಂಡಿದ್ದೇನೆ. ಆದರೆ ಅದರಿಂದ ನನಗೆ ಬೇಸರವಿಲ್ಲ. ಯಾರೂ ಮೇಲೂ ಬೇಸರವಿಲ್ಲ. ಅದೊಂದು ಕನಸು ಎಂದು ಎಲ್ಲವನ್ನು ನಾನು ಮರೆತುಬಿಟ್ಟಿದ್ದೇನೆ ಎಂದು ತಮ್ಮ ರಾಜಕೀಯ ಪಯಣದ ಕಹಿಗಳನ್ನು ಸ್ಮರಿಸಿದರು.
ಮೂರ್ನಾಲ್ಕು ಜಿಲ್ಲೆಗಳಲ್ಲಷ್ಟೇ ಜೆಡಿಎಸ್ ಇದೆ ಎಂಬ ವಿಪಕ್ಷಗಳ ಮಾತನ್ನು ನಿರಾಕರಿಸಿದ ಅವರು ಇಡೀ ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಇದೇ ದಾವಣಗೆರೆಯಲ್ಲಿ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ರಾಷ್ಟ್ರೀಯ ನಾಯಕ ಎಂದು ಬಣ್ಣಿಸಿದ್ದರು. ಆದರೆ ಈಗ ಲೆಕ್ಕಕ್ಕಿಲ್ಲ ಅಂತಿದ್ದಾರೆ. ಕಾದು ನೋಡೋಣ. ಸತ್ಯಕ್ಕೆ ಎಂದೂ ಗೆಲುವು ಎಂದು ಹೇಳಿದರು.
Comments