ಮಿಷನ್ 113ಕ್ಕೆ ಜೆಡಿಸ್ ರಣತಂತ್ರ: ಡಿಕೆಶಿ ಬೆಂಬಲಕ್ಕೆ ನಿಂತ ಎಚ್ ಡಿಕೆ?
ಬೆಂಗಳೂರು: ಇತ್ತೀಚೆಗೆ ಸಿ ಪೋರ್ ಸಂಸ್ಥೆ ಬಿಡುಗಡೆ ಮಾಡಿರುವ ಚುನಾವಣಾ ಪೂರ್ವ ಸಮೀಕ್ಷೆ ದೊಡ್ಡ ಬೋಗಸ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ ಫೋರ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರಲಿದೆ ಎಂಬ ವರದಿ ನೀಡಿದೆ. ‘ಸಿ ಫೋರ್ ಸಂಸ್ಥೆ ಮುಖ್ಯಸ್ಥ ಪ್ರೇಮಚಂದ್ ಪಲೇಟಿ ಅವರು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಅತ್ಯಂತ ಆಪ್ತರಾಗಿದ್ದಾರೆ. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ರಚಿಸಿರುವ ವಿಷನ್ ಗ್ರೂಪ್ ಸದಸ್ಯರು ಕೂಡ ಅವರೇ ಆಗಿದ್ದಾರೆ. ಇಂತವರು ನಡೆಸುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ 230 ಸ್ಥಾನ ಬಂದರೂ ಅಚ್ಚರಿಯಲ್ಲ ಎಂದು ವ್ಯಂಗ್ಯವಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 113 ಸೀಟುಗಳನ್ನು ಗೆಲ್ಲಲಿದೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ, ಕಾಂಗ್ರೆಸ್ 25-30 ಹಾಗೂ ಬಿಜೆಪಿ 10-15 ಸೀಟು ಗೆಲ್ಲುವುದು. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ನದ್ದೇ ಗೆಲುವು ಎಂದು ಅವರು ಭರವಸೆ ವ್ಯಕ್ತ ಪಡಿಸಿದ್ದಾರೆ.
ಗುಪ್ತಚರ ಇಲಾಖೆಯ ವರದಿಗಳು ಕೂಡ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 60ಕ್ಕಿಂತ ಹೆಚ್ಚಿನ ಸೀಟು ಗೆಲ್ಲಲಿದೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿವೆ ಎಂದು ವರದಿ ತಿಳಿಸಿದೆ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ.
ಸಚಿವ ಡಿ.ಕೆ. ಶಿವಕುಮಾರ್ ಮನೆಯ ಮೇಲೆ ದಾಳಿ ನಡೆದಾಗ ಆದಾಯಕ್ಕೆ ಮೀರಿದ ಆಸ್ತಿ ಸಿಕ್ಕಿಲ್ಲ. ಹೀಗಿರುವಾಗ ಅವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸೂಚಿಸಿದರು ಎಂಬ ಕಾರಣಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಹಲವರು ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದು ಹಾಸ್ಯಾಸ್ಪದ ಎಂದು ಹೇಳಿದರು.
Comments