ಕುಮಾರಸ್ವಾಮಿಯಿಂದ ಕೈ, ಕಮಲ ನಾಯಕರ ತರಾಟೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರಿ. ರಾಜ್ಯದ ಜನರ, ಸಮಸ್ಯೆಗಳ ಬಗ್ಗೆ ಅಮಿತ್ ಶಾಗೆ ಕಾಳಜಿ ಇಲ್ಲ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜೆ.ಪಿ.ನಗರದ ತಮ್ಮ ನವೀಕೃತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಪ್ರಮುಖ ಬೆಳವಣಿಗೆಗಳಾಗುತ್ತಿವೆ. ಎಲ್ಲ ಬೆಳವಣಿಗೆಗಳನ್ನೂ ನಾನು ಗಮನಿಸುತ್ತಿದ್ದೇನೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಅವರು ಬಂದಾಗ ನಾನು ತುಂಬ ನಿರೀಕ್ಷೆ ಇಟ್ಕೊಂಡಿದ್ದೆ. ಆದರೆ, ಬಿಜೆಪಿ ನಾಯಕರ ಜೊತೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲೇ ಇಲ್ಲ. ಕಾಂಗ್ರೆಸ್ ಸೋಲಿಸಿ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯಕ್ಕೆ ಅಮಿತ್ ಶಾ ಬಂದಿದ್ದು. ಬರಗಾಲ, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಮಿತ್ ಶಾ ಮಾತಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿಕೆಶಿ ಮನೆ ಮೇಲೆ ಐಟಿ ರೈಡ್ ಆದಾಗ ರಾಜ್ಯದ ಹಿರಿಯ ಬಿಜೆಪಿ ಮುಖಂಡರು ಯಾಕೆ ಸುಮ್ಮನಿದ್ರು? ಪ್ರತಿಭಟನೆ ಮಾಡಬೇಕಿತ್ತು, ರಾಜೀನಾಮೆ ಕೇಳಬೇಕಿತ್ತು ಅಂತಾ ಶಾ, ರಾಜ್ಯದ ಬಿಜೆಪಿ ಮುಖಂಡರಿಗೆ ಆದೇಶ ನೀಡಿದ ನಂತರ ಬಿಜೆಪಿ ನಾಯಕರು ಡಿಕೆಶಿ ರಾಜೀನಾಮೆ ಕೇಳಿದ್ದು ಹಾಸ್ಯಾಸ್ಪದ ಎಂದರು.
ಎರಡೂ ರಾಷ್ಟ್ರೀಯ ಪಕ್ಷಗಳ ರಾಜ್ಯದ ಸಮಸ್ಯೆ ಪರಿಹಾರದ ಬಗ್ಗೆ ಎಷ್ಟು ಕಾಳಜಿ ಇದೆ ಎಂದರೆ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಗೋವಾ ಸಿಎಂನ್ನು ಮಾತುಕತೆಗೆ ಒಪ್ಪಿಸ್ತೀವಿ. ತಕ್ಷಣ ಪರಿಹಾರ ಮಾಡೋಣ ಎಂದಿದ್ದಾರೆ. ಆ ಬಳಿಕ ಏನಾಯ್ತೋ ಗೊತ್ತಿಲ್ಲ. ಕೈ ಪಕ್ಷದವರು ರಾಯಚೂರಿಗೆ ರಾಹುಲ್ ಗಾಂಧಿ ಅವರನ್ನು ಕರೆಸಿ ಭಾಷಣ ಮಾಡಿಸಿದ್ರು. ಇನ್ನೊಂದೆಡೆ ಡೋಂಗಿ ಯಡಿಯೂರಪ್ಪ ಅಂತಾ ಸಿಎಂ ಹೇಳ್ತಾ ಇದಾರೆ. ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ದೊಡ್ಡ ಡೋಂಗಿ.
50 ಸಾವಿರ ರೂ. ಸಾಲ ಮನ್ನಾ ಮಾಡ್ತೀನಿ ಅಂದ್ರು ಸಿಎಂ. ಈ ಕ್ಷಣದವರೆಗೆ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಕೇವಲ ಸಾಲ ಮನ್ನಾ ಘೋಷಣೆಯಷ್ಟೇ ಆಗಿದೆ. ಈ ಘೋಷಣೆ ಆದ ಮೇಲೂ 200 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮಿತ್ ಶಾಗೆ ಆಗಲಿ, ಸಿಎಂಗೆ ಆಗಲಿ ರೈತರ ಬಗ್ಗೆ ಕಾಳಜಿ ಇಲ್ಲ. ಸಾಲ ಮನ್ನಾ ಮಾಡಿದ ಮೇಲೆ ರೈತರಿಗೆ ಸಾಲ ಕೊಡಲು ಬ್ಯಾಂಕ್‌ನವರು ಸಿದ್ಧರಿಲ್ಲ ಎಂದು ಕಿಡಿಕಾರಿದರು.
Comments