ಯಡಿಯೂರಪ್ಪ ವಿರುದ್ಧ ಎಸಿಬಿ ವತಿಯಿಂದ 3 ಎಫ್ಐಆರ್ ದಾಖಲು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಿಸಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ್ದಾರೆನ್ನಲಾದ ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್ ವಿರುದ್ಧ ಬಂದಿದ್ದ ದೂರಿನನ್ವಯ ಎಸಿಬಿ ತನಿಖೆ ಆರಂಭಿಸಿತ್ತು. ಈ ಪ್ರಕರಣ ಸೇರಿದಂತೆ ಮತ್ತೆರಡು ಪ್ರಕರಣಗಳಲ್ಲಿಯೂ ಎಸಿಬಿ ತನಿಖೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ, ಈಗ 3 ಎಫ್ಐಆರ್ ದಾಖಲಿಸಿದೆ. ಈ ಬಗ್ಗೆ ಯಡಿಯೂರಪ್ಪನವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಎಸಿಬಿಯ ಈ ನಡೆ ರಾಜ್ಯ ಸರ್ಕಾರದ ನಿರ್ದೇಶನದಿಂದ ಆಗಿದೆಯೇ ಎಂಬ ಗುಮಾನಿ ಅವರ ಅಭಿಮಾನಿಗಳ ವಲಯದಲ್ಲಿ ಹಬ್ಬಿದೆ. ಇತ್ತೀಚೆಗಷ್ಟೇ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ರೈಡ್ ಆಗಿತ್ತು. ಇದಕ್ಕೆ ಕೇಂದ್ರ ಸರ್ಕಾರವೇ ಸೂತ್ರಧಾರಿ ಎಂದೂ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವೂ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ಮತ್ತೆ ಹೊರತಗೆಯಲು ಮುಂದಾಗಿದೆ ಎಂದೂ ಹೇಳಲಾಗಿತ್ತು.
Comments