ಜೆಡಿಎಸ್ ನಿಂದ ಮತ್ತೊಂದು ವಿಕೆಟ್ಗೆಗಾಳ.. ಮಧುಬಂಗಾರಪ್ಪ ಸುಳಿವು!

ಅಂಕೋಲಾ: ಮಾಜಿ ಸಚಿವ ಆನಂದ ಆಸ್ನೋಟಿಕರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ಅಂಕೋಲಾಕ್ಕೆ ಬಂದಿದ್ದ ಮಧು ಬಂಗಾರಪ್ಪ ಸುದ್ದಿಗಾರರ ಜೊತೆ ಮಾತನಾಡಿ, ವಸಂತ ಆಸ್ನೋಟಿಕರ್ ಮೊದಲ ಬಾರಿಗೆ ಶಾಸಕರಾದದ್ದು ಕೆಸಿಪಿಯಿಂದಲೇ. ಹಾಗಾಗಿ ಅವರ ಮಗ ಆನಂದ ಅಸ್ನೋಟಿಕರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರುವ ಯತ್ನಗಳು ನಡೆದಿವೆ ಎಂದರು. ರಾಜಕೀಯದಿಂದ ದೂರವೇ ಉಳಿದಿರುವ ಆನಂದ್ ಅವರನ್ನು ಕಾರವಾರ ಕ್ಷೇತ್ರದಿಂದ ಜೆಡಿಎಸ್ ಕಣಕ್ಕೆ ಇಳಿಸುವ ಸಾಧ್ಯತೆಗಳನ್ನು ಸೂಚ್ಯವಾಗಿ ಹೇಳಿದ ಮಧು ಬಂಗಾರಪ್ಪ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುವ ತಾಕತ್ತು ಇರುವುದು ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಗೆ ಮಾತ್ರ ಎಂದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿದೆ. ಜನರು ಸಹ ಜೆಡಿಎಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಜನಪರ ಕಾರ್ಯಕ್ರಮಗಳನ್ನು ನೀಡಿರುವ ಕುಮಾರಸ್ವಾಮಿ ಅವರ ಮೇಲೆ ರಾಜ್ಯದ ಜನತೆಗೆ ನಂಬಿಕೆ ಇದೆ. ಯುವಕರಿಗೆ, ಹೊಸ ಮುಖಗಳಿಗೆ ಆದ್ಯತೆ ನೀಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಪ್ರಯತ್ನ ಮಾಡಲಾಗುತ್ತಿದೆ. ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಆನಂದ ಅಸ್ನೋಟಿಕರ್ ಸದ್ಯದಲ್ಲೇ ಜೆಡಿಎಸ್ ಸೇರಲಿದ್ದು, ಕ್ಷೇತ್ರದಲ್ಲಿ ಸಂಚರಿಸಲಿದ್ದಾರೆಂದು ಮಧು ಹೇಳಿದರು.
Comments