ಎಚ್ಡಿಕೆ ನೇತೃತ್ವದ ಕ್ಯಾಬ್ ಸೇವೆಗೆ ಹೆಸರು ಅಂತಿಮ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚಾಲಕರೇ ಸೇರಿ ಆರಂಭಿಸುತ್ತಿರುವ ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ಕೊನೆಗೂ ಹೆಸರು ಅಂತಿಮವಾಗಿದೆ.
ಎಚ್‌ಡಿಕೆ ಹೆಸರಿನ ಬದಲು ನಮ್ಮ ಟೈಗರ್’ ಕ್ಯಾಬ್ ಎಂದು ಹೆಸರಿಡಲಾಗಿದೆ. ಈ ಮೊದಲು ಎಚ್ಡಿಕೆ ಕ್ಯಾಬ್ ಎಂದು ಹೆಸರಿಡಲು ಚಾಲಕ ಮುಖಂಡರು ನಿರ್ಧರಿಸಿದ್ದರು. ಆದರೆ, ಎಚ್ .ಡಿ. ಕುಮಾರಸ್ವಾಮಿ ಅವರು ತಮ್ಮ ಹೆಸರಿನ ಬದಲು ಬೇರೊಂದು ಹೆಸರು ಇಡುವಂತೆ ಸೂಚಿಸಿದ್ದರು. ಅದರಂತೆ ಸುದೀರ್ಘ ಚರ್ಚೆ ಯ ಬಳಿಕ ‘ನಮ್ಮ ಟೈಗರ್’ ಕ್ಯಾಬ್ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ನೂತನ ಕ್ಯಾಬ್ ಸೇವೆ ಆಗಸ್ಟ್ 15ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತವಾಗುವ ಸಾಧ್ಯತೆಯಿದೆ.
ಸ್ಟಾರ್ಟ್‌ಆ್ಯಪ್ ಮಾದರಿಯ ‘ಹುಲಿ ಟೆಕ್ನಾಲಜಿಸ್’ ಎಂಬ ಕಂಪನಿ ಆರಂಭಿಸಿದ್ದು, ಇದರ ನಿರ್ವಹಣೆಯ ಹೊಣೆಯನ್ನು ಎಸ್‌ಡಿಪಿಎಲ್ ಎಂಬ ಸಂಸ್ಥೆಗೆ ವಹಿಸಲಾಗಿದೆ. ನಾಗವಾರ ಮತ್ತು ಹೆಣ್ಣೂರು ನಡುವಿನ ರಿಂಗ್ ರಸ್ತೆಯಲ್ಲಿ ನೂತನ ಕಚೇರಿ ನಿರ್ಮಾಣ ಕಾರ್ಯಭರದಿಂದ ಸಾಗಿದೆ ಎಂದು ಹುಲಿ ಟೆಕ್ನಾಲಜಿಸ್‌ನ ಮುಖ್ಯಸ್ಥ ತನ್ವೀರ್ ಪಾಷಾ ತಿಳಿಸಿದರು. ಈಗಾಗಲೇ ನಮ್ಮ ಸಂಸ್ಥೆಯ ಅಡಿಯಲ್ಲಿ ಕ್ಯಾಬ್ ಸೇವೆ ನೀಡಲು ಸುಮಾರು 25 ಸಾವಿರ ಚಾಲಕರು ಮುಂದೆ ಬಂದಿದ್ದಾರೆ. ಸೇವೆ ಆರಂಭಗೊಂಡ ಬಳಿಕ ಮತ್ತಷ್ಟು ಚಾಲಕರು ಸಂಸ್ಥೆಗೆ ಸೇರುವ ನಿರೀಕ್ಷೆಯಿದೆ. ಚಾಲಕರಿಗೆ ಇತರೆ ಕ್ಯಾಬ್ ಸೇವಾ ಸಂಸ್ಥೆಗಳು ನೀಡುತ್ತಿರುವ ಸೌಲಭ್ಯಗಳಿಗಿಂತ ಉತ್ತಮವಾದ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆ. ಅಗಸ್ಟ್ ಮೊದಲ ಅಥವಾ ಎರಡನೇ ವಾರದಿಂದ ಸಂಸ್ಥೆಗೆ ಕ್ಯಾಬ್ ಗಳನ್ನು ಅಟ್ಯಾಚ್ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಕಾರಿನ ಸ್ಥಿತಿ, ದಾಖಲೆಗಳ ಪರಿಶೀಲನೆ, ಪರವಾನಗಿ, ವಾಹನ ವಿಮೆ ಮೊದಲಾದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ಯಾಬ್'ಗಳನ್ನು ಸಂಸ್ಥೆಗೆ ಅಟ್ಯಾಚ್ ಮಾಡಿಕೊಳ್ಳಲಾಗುವುದು ಎಂದರು.
Comments