ಹಳ್ಳಿ ಹೈದನ ಪತ್ರಕ್ಕೆ ಪ್ರಧಾನಿ ಮೋದಿಯಿಂದ ಪ್ರತಿಕ್ರಿಯೆ!

26 Jul 2017 5:39 PM |
862 Report

ಕೊಡಗಿನ ಗಡಿಭಾಗದಲ್ಲಿರುವ ಕರಿಕೆ ಗ್ರಾಮದಲ್ಲಿನ ದೂರವಾಣಿ ಸಮಸ್ಯೆ ಬಗ್ಗೆ ಹೊದ್ದೆಟ್ಟಿ ಸುಧೀರ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ಸಿಕ್ಕಿದೆ.

ಆಧುನಿಕ ಯುಗದಲ್ಲಿ ಎಲ್ಲವೂ ಡಿಜಿಟಲೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಕರಿಕೆಯಂತಹ ಗ್ರಾಮಕ್ಕೆ ದೂರವಾಣಿ ಸಂಪರ್ಕ ಸಿಗದೆ ಜನ ಪರದಾಡುತ್ತಿರುವುದು ಗ್ರಾಮಸ್ಥರಲ್ಲಿ ಬೇಸರವನ್ನುಂಟು ಮಾಡಿತ್ತು. ಇರುವ ಮೊಬೈಲ್ ಟವರ್ ಕೆಟ್ಟು ಹೋಗಿದ್ದು, ಅದನ್ನು ದುರಸ್ತಿ ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿರಲಿಲ್ಲ. ಈ ಬಗ್ಗೆ ದೂರುಗಳನ್ನು ನೀಡಿ ಸಾಕಾಗಿತ್ತು. ಬೇರೆ ದಾರಿ ಕಾಣದೆ ಗ್ರಾಮದ ಹೊದ್ದೆಟ್ಟಿ ಸುಧೀರ್‍ ಕುಮಾರ್ ಎಂಬುವರು ತಮ್ಮ ಸಮಸ್ಯೆಯನ್ನು ಇಮೇಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದರು.

ಇದೀಗ ಪ್ರಧಾನಿಗಳ ಕಾರ್ಯಾಲಯದಿಂದ ಕೇವಲ 15 ದಿನಗಳಲ್ಲಿ ಪ್ರತಿಕ್ರಿಯೆ ಬಂದಿದ್ದು, ಇದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ. ಹಾಗೆನೋಡಿದರೆ ಕೊಡಗು - ಕೇರಳ ಗಡಿಪ್ರದೇಶವಾದ ಕರಿಕೆ ಗ್ರಾಮ ಅಂತರ್ಜಾಲ ಸೌಲಭ್ಯ, ಇ- ಬ್ಯಾಂಕಿಂಗ್ ಸೌಲಭ್ಯ, ವೈಫೈ ಸಂಪರ್ಕಗಳಿಂದ ವಂಚಿತವಾಗಿ ಕುಗ್ರಾಮದಂತಾಗಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮಕ್ಕೆ ದೂರವಾಣಿ ಸಂಪರ್ಕದ ಆಧುನಿಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಸುಧೀರ್ ತಮ್ಮ ಮನವಿ ಪತ್ರದಲ್ಲಿ ಪ್ರಧಾನಿಗಳ ಗಮನಕ್ಕೆ ತಂದಿದ್ದರು. ಮೂಲಗಳ ಪ್ರಕಾರ ಜಿಲ್ಲಾ ದೂರವಾಣಿ ಇಲಾಖಾ ಸಂಪರ್ಕಾಧಿಕಾರಿಗಳಿಗೆ ಪ್ರಧಾನಿಗಳ ನಿರ್ದೇಶನ ಪತ್ರ ರವಾನೆಯಾಗಿದ್ದು, ಅಧಿಕಾರಿಗಳು ಶೀಘ್ರದಲ್ಲೇ ಕರಿಕೆಗೆ ಡಿಜಿಟಲ್ ಬಳಕೆಗೆ ಅಗತ್ಯವಾದ ಯಾಂತ್ರಿಕ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಮುಂದಾಗಿದ್ದಾರೆ ಎನ್ನಲಾಗಿದೆ.

Edited By

Admin bjp

Reported By

Admin bjp

Comments