ಆನ್ಲೈನ್ ಮೂಲಕ ರೈತರ ಬೆಳೆ ಪರಿಹಾರ ನಿಧಿ: ಸಿದ್ದರಾಮಯ್ಯ
ಹಿಂಗಾರು ಹಂಗಾಮಿನ ಬೆಳೆ ಪರಿಹಾರವನ್ನು ಐದೂವರೆ ಲಕ್ಷ ರೈತರ ಖಾತೆಗಳಿಗೆ ಆನ್ಲೈನ್ ಮೂಲಕ ಪಾವತಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಚಾಲನೆ ನೀಡಿದರು. ಹಿಂಗಾರು ಹಂಗಾಮಿನಲ್ಲಿ ಉಂಟಾಗಿದ್ದ ಬೆಳೆ ಹಾನಿಗೆ ಸಂಬಂಧಿಸಿದಂತೆ 402 ಕೋಟಿ ರೂ. ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಉಳಿದ ಹಣವನ್ನು ಇನ್ನು 10 ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು. ಹಿಂಗಾರು ಹಂಗಾಮಿನಲ್ಲಿ 10 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಬೆಳೆ ಹಾನಿಯಾಗಿದ್ದು, ಕೇಂದ್ರ ಸರ್ಕಾರ 795 ಕೋಟಿ ರೂ. ಮಾತ್ರ ಮಂಜೂರು ಮಾಡಿದೆ. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ(ಎನ್‍ಡಿಆರ್‍ಎಫ್) ಮಾರ್ಗಸೂಚಿಯಂತೆ 3,310 ಕೋಟಿ ಪರಿಹಾರ ನೀಡಲು ರಾಜ್ಯದಿಂದ ಮನವಿ ಮಾಡಲಾಗಿತ್ತು.
ಆದರೆ 795 ಕೋಟಿ ರೂ. ಮಾತ್ರ ಮಂಜೂರು ಮಾಡಿದ್ದು, ಇದರಲ್ಲಿ ಐದೂವರೆ ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ 402 ಕೋಟಿ ರೂ. ಹಾಗೂ 10 ದಿನಗಳ ನಂತರ 383 ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ವಿಳಂಬವಾದ ಹಿನ್ನೆಲೆಯಲ್ಲಿ ಪರಿಹಾರ ಜಮೆಯಲ್ಲಿ ವಿಳಂಬವಾಗಿದೆ ಎಂದು ವಿವರಿಸಿದರು.
Comments