ಕೆಆರ್ ಎಸ್ ನಿಂದ ನಾಲೆಗೆ ನೀರು ಬಿಡದಿದ್ದರೆ ಎಚ್ಡಿಕೆ ಯಿಂದ ಪಾದಯಾತ್ರೆ
ಮುಂದಿನ ವಾರದೊಳಗೆ ಕೆಆರ್ಎಸ್ ಡ್ಯಾಮ್ನಿಂದ ಕೆರೆಗಳಿಗೆ ನೀರು ಬಿಡದಿದ್ದರೆ ಹುಣಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಕಾಡಾ ಕಚೇರಿ ಮುಂಭಾಗ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಮ್‍ನಿಂದ ನಾಲೆಗಳಿಗೆ ನೀರು ಬಿಡುವಂತೆ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸದೆ ಸುಮ್ಮನೆ ಕುಳಿತಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರು ಕೊಡಿ ಎಂದು ಕೇಳುತ್ತಿದ್ದೇವೆ. ಮುಂದಿನ ಒಂದು ವಾರದೊಳಗೆ ನೀರು ಕೊಡದಿದ್ದರೆ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ-ಜಾನುವಾರುಗಳು ಯಾತನೆ ಅನುಭವಿಸುತ್ತಿದ್ದಾರೆ. ಡ್ಯಾಮ್‍ನಲ್ಲಿರುವ ಸ್ವಲ್ಪ ನೀರನ್ನು ಕುಡಿಯಲು ಕೊಡಿ ಎಂದು ರಾಜ್ಯ ಸರ್ಕಾರವನ್ನು ಕೇಳುತ್ತಿದ್ದೇವೆ. ಆದರೆ, ಸರ್ಕಾರವು ಉಳಿದ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ. ಇದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
Comments