ಜೆಡಿಎಸ್ ನ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿಯಿರುವಾಗ ಜಾತ್ಯತೀತ ಜನತಾದಳದ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.ಜೆಡಿಎಸ್ನ 7 ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದಂತಾಗಿದೆ. ಬರುವ ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ಜೆಡಿಎಸ್ ನ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಭಾನುವಾರ ತುಮಕೂರಿನ ಮಾಜಿ ಶಾಸಕ ಎಚ್.ನಿಂಗಪ್ಪ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, 'ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು, ಆ ಪಕ್ಷಕ್ಕೆ ಸೇರಲು ಒಪ್ಪಿಗೆ ಸಿಕ್ಕಿದೆ. ತಮ್ಮ ಜೊತೆಗೆ ಜೆಡಿಎಸ್ ನ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ' ಎಂದು ಹೇಳಿದರು.
ಜೆಡಿಎಸ್ ನ 7 ಬಂಡಾಯ ಶಾಸಕರು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಷರತ್ತು ಹಾಕಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವಿಳಂಬ ಮಾಡಿತ್ತು. ರಾಜ್ಯಸಭಾ ಚುನಾವಣೆ ಆದ ನಂತರ ಎಲ್ಲಾ ವಿವಾದಗಳಲ್ಲೂ ಈ ಬಂಡಾಯ ಶಾಸಕರು ಕಾಂಗ್ರೆಸ್ ಪರ ನಿಂತಿದ್ದಾರೆ.ಜಮೀರ್ ಹೇಳಿಕೆ ನೋಡಿದರೆ ಶಾಸಕರಾದ ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿ ಸಿದ್ದೇಗೌಡ, ಜಮೀರ್ ಅಹಮ್ಮದ್, ಇಕ್ಬಾಲ್ ಅನ್ಸಾರಿ ಮತ್ತು ಭೀಮಾನಾಯ್ಕ್ ಅವರಿಗೆ ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವುದು ಖಚಿತವಾಗಿದಂತಾಗಿದೆ.
Comments