ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ನೀರಿನ ಸಮಸ್ಯೆಗೆ ಇತಿಶ್ರೀ: ಎಚ್ ಡಿಕೆ

ಮಹದಾಯಿ ಸಮಸ್ಯೆಗೆ ಪರ್ಯಾಯ ಆಲೋಚನೆ ಮಾಡುವಲ್ಲಿ ಸರ್ಕಾರ ಎಡವಿದ್ದು, ಈ ಸಮಸ್ಯೆ ನಿವಾರಣೆಗೆ ಕೃಷ್ಣ ನದಿಯಲ್ಲಿ ರಾಜ್ಯಕ್ಕೆ ಲಭ್ಯವಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದ್ದರೂ ರಾಜ್ಯ ಸರ್ಕಾರ ಆ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದ ಜೆಎಸ್ ಎಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಜುಲೈ 23ರಂದು ಆಯೋಜಿಸಲಾಗಿದ್ದ 'ಕುಮಾರಪಥ-2018'ರ ಅಂಗವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿ,
ಕೃಷ್ಣ ನದಿಯ ಆಲಮಟ್ಟಿ ಜಲಾಶಯದಿಂದ ರಾಜ್ಯಕ್ಕೆ ಲಭ್ಯವಿರುವ 1000 ಟಿಎಂಸಿ ಅಡಿ ನೀರಿನಲ್ಲಿ ಕೇವಲ 600 ಟಿಎಂಸಿ ಅಡಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದ 400 ಟಿಎಂಸಿ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷ್ಣ ನದಿಯ ಎ, ಬಿ ಸ್ಕೀಂ ಜಾರಿಗೊಳಿಸಿ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು ಎಂದೂ ಅವರು ಭರವಸೆ ನೀಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಆಡಳಿತವನ್ನು ತಿಂಗಳಲ್ಲಿ ಒಂದು ವಾರ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗುವುದು ಎಂದರು.
Comments