ಸಿಎಂ ಸಿದ್ದರಾಮಯ್ಯ ಚುನಾವಣೆಗಾಗಿ ಕೆರೆಗಳ ಮಾರಾಟ: ಹೆಚ್.ವಿಶ್ವನಾಥ್

ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫೈ ಗೆ ಮುಂದಾಗಿರುವುದು ಆಘಾತಕಾರಿ. ಕೆರೆಗಳು ಕಾಣುತ್ತಿಲ್ಲ ಎಂಬ ಕಾರಣದಿಂದ ಡಿನೋಟಿಫೈ ಮಾಡಲು ಮುಂದಾಗುವ ಮೂಲಕ ಚುನಾವಣೆಗೆ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಹೆಚ್.ವಿಶ್ವನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಕೇಂದ್ರ ಸರ್ಕಾರ ಕೆರೆಗಳ ಉಳಿವಿಗೆ ಹಣ ವ್ಯಯ ಮಾಡುತ್ತಿದೆ ಆದರೆ ರಾಜ್ಯ ಸರ್ಕಾರ ಡಿನೋಟಿಫೈ ಮಾಡುತ್ತಿದೆ. ರಾಜಕಾಲುವೆ ಉಳಿವಿನ ಹೆಸರಿನಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ದರ್ಶನ್ ಮನೆ ತೆರವುಗೊಳಿಸದೆ, ಬಡವರ ಮನೆ ಒಡೆದಿರುವುದು ಯಾವ ನ್ಯಾಯ? ರಾಜ್ಯದಲ್ಲಿ ಜನ ಕುಡಿಯುವ ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ ಹೀಗಿರುವಾಗ ಕೆರೆ ಡಿನೋಟಿಫೈ ಮಾಡಿ ರಿಯಲ್ ಎಸ್ಟೇಟ್ ಅವರಿಗೆ ಮಾರಲು ಮುಂದಾಗಿದ್ದಾರೆ ಎಂದು ಛೇಡಿಸಿದರು.
ಪ್ರಜಾಪ್ರಭುತ್ವದ ಮಹಾರಾಜ ಸಿದ್ದರಾಮಯ್ಯ ಕೆರೆಗಳನ್ನು ಮಾರುತ್ತಿದ್ದಾರೆ. 1904 ರಲ್ಲಿ ಹಾನಗಲ್ಲಿನ ವೀರಶೈವ ಸಮುದಾಯದ ಸಂಸ್ಥಾಪಕರಾದ ಕುಮಾರಸ್ವಾಮಿಯವರು ಲಿಂಗಾಯತ ಬೇರೆ ಅಲ್ಲ ವೀರಶೈವ ಬೇರೆ ಅಲ್ಲ ಎಂದು ಹೇಳಿದ್ದಾರೆ. ಆದರೆ ಸಿಎಂ ವಿವಾದ ಸೃಷ್ಟಿಸಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆದಿದ್ದಾರೆ ಎಂದು ದೂರಿದರು.
ಭ್ರಷ್ಟಾಚಾರ ರಹಿತ ಸರ್ಕಾರ ನೀಡುವುದಾಗಿ ಕಾಲ್ನಡಿಗೆ ಯಾತ್ರೆ ನಡೆಸಿದ ಸಿಎಂ ಕೆರೆಗಳ ಡಿನೋಟಿಫೈ ಮಾಡುವುದು ಯಾವ ನ್ಯಾಯ? ಒಂದು ಕಡೆ ಕೆರೆ ತುಂಬಿಸಲು 150 ಕೋಟಿ ಹಣ ಬಿಡುಗಡೆ ಮಾಡಿ ಇನ್ನೊಂದೆಡೆ ಕೆರೆ ಡಿನೋಟಿಫೈ ಮಾಡಲಾಗುತ್ತಿದೆ. ಕೆರೆಗಳನ್ನು ಮಾರುತ್ತಿದ್ದರೂ ಪರಿಸರವಾದಿಗಳು ಎಲ್ಲಿ ಹೋಗಿದ್ದಾರೆ. ಇವರೇನು ಪರಿಸರ ವಾದಿಗಳೋ, ವ್ಯಾದಿಗಳೋ ತಿಳಿಯುತ್ತಿಲ್ಲ ಎಂದು ಕಿಡಿಕಾಡಿದರು.
Comments