ಶಾಸಕ ಜಮೀರ್ ವಿರುದ್ಧ ಗೌಡ್ರ ಸವಾಲು
ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುವುದು ನನ್ನ ಗುರಿ. ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಜಮೀರ್ ಅಹಮದ್ಗೆ ನೇರ ಸವಾಲು ಹಾಕಿದ್ದಾರೆ.
ಚಾಮರಾಜಪೇಟೆಯ ಅಜಾದ್ ನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಸಭೆ ಮಾಡಿದರೆ ಜನ ಮನೆ ಬಿಟ್ಟು ಬರಲ್ಲ ಅಂದಿದ್ದರು. ಇಲ್ಲಿ ಸಭೆ ಮಾಡಿದರೆ ಕೇಸ್ ಹಾಕುತ್ತಾರೆ ಎಂದು ಸ್ನೇಹಿತರು ಹೇಳಿದ್ದರು. ನಾನು ಧೈರ್ಯ ಕೊಟ್ಟ ಮೇಲೆ ಸಭೆ ಮಾಡಿದ್ದಾರೆ. ಚಾಮರಾಜಪೇಟೆಯಿಂದಲೇ ಹೋರಾಟ ಆರಂಭಿಸುತ್ತೇವೆ ಎಂದು ಹೇಳಿದರು.
ಟೀಕೆ ಮಾಡಿ ದೊಡ್ಡ ಮನುಷ್ಯ ಆಗಲ್ಲ. ನಾನಿನ್ನೂ ಸಣ್ಣ ಮನುಷ್ಯ. ಜಮೀರ್ ಅಹಮದ್ ಅವರನ್ನು ಗೆಲ್ಲಿಸಲು ಚಾಮರಾಜಪೇಟೆ ಗಲ್ಲಿ, ಸ್ಲಂಗಳಲ್ಲಿ ಓಡಾಡಿದ್ದೇನೆ. ಮಾಜಿ ಪಿಎಂ, ಸಿಎಂ ಆಗಿದ್ದ ನೀವು ಇಲ್ಯಾಕೆ ಬಂದ್ರಿ ಅಂದ್ರು. ನಾನು ಯಾವುದನ್ನೂ ಲೆಕ್ಕಿಸದೆ ದರಿದ್ರ ನಾರಾಯಣ ರ್ಯಾಲಿ ಮಾಡಿ ಗೆಲ್ಲಿಸಿದೆ ಎಂದು ಜಮೀರ್ ಅಹ್ಮದ್ ವಿರುದ್ಧ ದೇವೇಗೌಡರು ಗುಡುಗಿದರು. ಅಪ್ಪನನ್ನು ಬಿಟ್ಟು ಬಂದರೆ ಕುಮಾರಣ್ಣನನ್ನು ಸಿಎಂ ಮಾಡುತ್ತಾರಂತೆ. ಚಾಮರಾಜಪೇಟೆಯ ಕಾರ್ಯಕರ್ತರಿಗೆ ತೊಂದರೆ ಆದರೆ ಸಿದ್ದರಾಮಯ್ಯರ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ಜಮೀರ್ ಹೇಳಿದ್ದರು. ಎಲ್ಲೆಲ್ಲಿ ಏನೇನ್ ಮಾಡುತ್ತೀರೋ ಮಾಡಿ. ಇನ್ನು 10 ತಿಂಗಳು ಮಾಡಿ ಎಂದು ಭಿನ್ನಮತೀಯರ ವಿರುದ್ಧ ವಾಗ್ದಾಳಿ ನಡೆಸಿದರು.
ಚಾಮರಾಜಪೇಟೆಯಲ್ಲಿ ಸಭೆ ಮಾಡುವುದಕ್ಕೆ ಆಗೋದಿಲ್ಲ ಅಂತಿದ್ದರು. ಸಭೆ ನಡೆಸಬಾರದು ಅನ್ನೋದಕ್ಕೆ ಇದೇನು ಪಾಕಿಸ್ತಾನ ಅಲ್ಲಾ. ಇಲ್ಲಿಂದಲೇ ನಾನು ಹೋರಾಟ ಆರಂಭಿಸುತ್ತೇನೆ. ಯಾರು ಏನು ಮಾಡ್ತರೋ ನೋಡೋಣ ಎಂದು ಶಾಸಕ ಜಮೀರ್ ಅಹಮದ್‌ಗೆ ದೇವೇಗೌಡರು ಸವಾಲು ಹಾಕಿದರು.
Comments