ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಸಿದ್ಧತೆ
ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕುರಿತು ಎಚ್.ಡಿ. ಕುಮಾರಸ್ವಾಮಿ ಚಿತ್ರ ಮಾಡುವುದಕ್ಕೆ ಸಜ್ಜಾಗಿದ್ದಾರೆ. ತಮ್ಮ ಮಗ ನಿಖೀಲ್ ಅಭಿನಯದಲ್ಲಿ "ನಾಡಪ್ರಭು ಕೆಂಪೇಗೌಡ' ಎಂಬ ಚಿತ್ರ ನಿರ್ಮಿಸುವುದಕ್ಕೆ ಅವರು ಸಿದ್ಧತೆ ನಡೆಸುತ್ತಿದ್ದು, ಚಿತ್ರ ಮುಂದಿನ ವರ್ಷ ಏಪ್ರಿಲ್ನಲ್ಲಿ ಸೆಟ್ಟೇರಲಿದೆ.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕುರಿತು ಚಿತ್ರ ಮಾಡಬೇಕೆಂಬುದು ಕುಮಾರಸ್ವಾಮಿ ಅವರ ಹಲವು ವರ್ಷಗಳ ಕನಸಂತೆ. ಅದಕ್ಕೆ ಈಗ ಮುಹೂರ್ತ ಕೂಡಿ ಬಂದಿದ್ದು, ಆಗಸ್ಟ್ 13ರಂದು ಚಿತ್ರಕ್ಕೆ ಪೂಜೆ ನೆರವೇರಲಿದೆ. ಬಳಿಕ ಇತಿಹಾಸಕಾರರು ಮತ್ತು ವಿದ್ವಾಂಸರನ್ನೊಳಗೊಂಡ ತಂಡವು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚನೆಯಲ್ಲಿ ತೊಡಗಲಿದೆ. ಸುಮಾರು 8 ತಿಂಗಳ ಪ್ರೀ-ಪ್ರೊಡಕ್ಷನ್ ಕೆಲಸದ ನಂತರ, ಏಪ್ರಿಲ್‌ನಲ್ಲಿ ಚಿತ್ರದ ಮುಹೂರ್ತ ನಡೆದು, ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕರು ಆಯ್ಕೆಯಾಗಬೇಕಿದೆ.
"ನಾಡಪ್ರೌಭು ಕೆಂಪೇಗೌಡ' ಚಿತ್ರದಲ್ಲಿ ಕೆಂಪೇಗೌಡರ ಜೀವನದ ಜತೆಗೆ ಸಾಧನೆ ಮತ್ತು ಮಹತ್ವದ ಕುರಿತು ಬೆಳಕು ಚೆಲ್ಲಲಿದ್ದು, ಹಲವು ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿರುವ ಜಿ.ಕೆ. ಭಾರವಿ ಚಿತ್ರಕಥೆ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಇನ್ನು ತೆಲುಗಿನ "ಬಾಹುಬಲಿ' ಚಿತ್ರದ ಗ್ರಾಫಿಕ್ಸ್ ಕೆಲಸ ಮಾಡಿದ್ದ ತಂಡದವರೇ, ಈ ಚಿತ್ರಕ್ಕೂ ಗ್ರಾಫಿಕ್ಸ್ ಕೆಲಸ ಮಾಡಲಿದ್ದು, ಘವ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಬಜೆಟ್ ವಿಚಾರದಲ್ಲೂ ಈ ಚಿತ್ರವು, ಕನ್ನಡದ ಅತ್ಯಂತ ದೊಡ್ಡ ಬಜೆಟ್ ಚಿತ್ರವಾಗಲಿದೆ ಎಂದು ತಿಳಿದು ಬಂದಿದೆ.
Comments