ಮಹಿಳಾ ಸಮಾವೇಶದಲ್ಲಿ ಜೆಡಿಎಸ್ ನಿಂದ ಭರವಸೆಗಳ ಮಹಾಪೂರ
ಸಮಾವೇಶದೊಂದಿಗೆ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಜೆಡಿಎಸ್, ಅಧಿಕಾರಕ್ಕೆ ಬಂದರೆ 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಜೀವನ ಪರ್ಯಂತ ತಿಂಗಳಿಗೆ 5 ಸಾವಿರ ರೂ. ಹಾಗೂ ಗರ್ಭಿಣಿಯರಿಗೆ 9 ತಿಂಗಳು ಕಾಲ 6 ಸಾವಿರ ರೂ. ಗೌರವಧನ, ವಿಧವೆಯರು ಹಾಗೂ ಅಂಗವಿಕಲರ ಮಾಶಾಸನ 2 ಸಾವಿರ ರೂ.ಗೆ ಏರಿಸುವುದಾಗಿ ಘೋಷಿಸಿದೆ.
ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದರೆ 70 ವರ್ಷ ತುಂಬಿದ ಹಿರಿಯ ನಾಯಕರಿಗೆ ಮಾಸಿಕ 5 ಸಾವಿರ ಹಾಗೂ ಗರ್ಭಿಣಿಯರಿಗೆ 9 ತಿಂಗಳು ಕಾಲ ಮಾಸಿಕ 6 ಸಾವಿರ ಗೌರವಧನ ನೀಡಲಾಗುವುದು. ಅಂಗವಿಕಲರು ಹಾಗೂ ವಿಧವೆಯರ ಮಾಶಾಸನ 2 ಸಾವಿರ ರೂ.ಗೆ ಏರಿಸಲಾಗುವುದು ಎಂದು ಘೋಷಿಸಿದರು. ಸಸಿ ನೆಡುವ ಅಭಿಯಾನಕ್ಕೆ 5 ಲಕ್ಷ
ಯುವಕ-ಯುವತಿಯರನ್ನು ಬಳಸಿಕೊಂಡು 25 ವರ್ಷ ಅವರಿಗೆ ಉದ್ಯೋಗ ಖಾತರಿಯೊಂದಿಗೆ ಮಾಸಿಕ 5 ರಿಂದ 6 ಸಾವಿರ ರೂ. ವೇತನ ನೀಡಲು ಯೋಜನೆ ಜಾರಿಗೊಳಿಸಲಾಗುವುದು. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಂಡು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲಾಗುವುದು. ಇದಕ್ಕೆ ಎಷ್ಟು ಸಾವಿರ ಕೋಟಿ ವೆಚ್ಚವಾದರೂ ಹಿಂದೇಟು ಹಾಕುವುದಿಲ್ಲ ಎಂದರು.
ಸಮಾವೇಶದಲ್ಲಿ 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ ಪ್ರತಿ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ರೂಪಿಸಿದ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಲಾಯಿತು. ಐದು ಪ್ರಮುಖ ನಿರ್ಣಯಗಳನ್ನು ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಾಯಕ್ ಸೂಚಿಸಿದರು. ಜೆಡಿಎಸ್
ವಕ್ತಾರ, ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಅನುಮೋದಿಸಿದರು. ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್ ಹಾಗೂ ಲೀಲಾದೇವಿ ಆರ್. ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
Comments