ಡಿಐಜಿ ರೂಪಾ ವರ್ಗಾವಣೆಗೆ ಎಚ್ಡಿಕೆ ಅಸಮಾಧಾನ
ಕಾಂಗ್ರೆಸ್ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆಯಿಲ್ಲ. ಸರ್ಕಾರಕ್ಕೆ ಅಕ್ರಮ ದಂಧೆಗಳನ್ನು ಬೆಂಬಲಿಸುವುದರಲ್ಲೇ ಹೆಚ್ಚು ಆಸಕ್ತಿ. ಕಾರಾಗ್ರಹದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟ ಕಾರಾಗ್ರಹ ಡಿಐಜಿ ರೂಪಾ ಅವರ ಪ್ರಾಮಾಣಿಕತೆ ಸರ್ಕಾರ ನೀಡಿದ ಬೆಲೆ ಇದು...' ಎಂದು ಎಚ್ ಡಿ ಕುಮಾರಸ್ವಾಮಿ, ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಭ್ರಷ್ಟಾಚಾರ, ಅಕ್ರಮದ ಬಗ್ಗೆ ಎರಡು ವರದಿ ನೀಡಿ ಡಿಜಿ ಹಾಗೂ ಐಜಿ ಸತ್ಯನಾರಾಯಣ ರಾವ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರೆಸಿದ್ದ ಕಾರಾಗ್ರಹ ಡಿಐಜಿ ಡಿ ರೂಪಾ ಅವರನ್ನು ಕರ್ನಾಟಕ ಸರ್ಕಾರ ವರ್ಗಾವಣೆ ಮಾಡಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಡಿಜಿಪಿಯಾಗಿ ನೇಮಿಸದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸರ್ಕಾರವೇ ಬೆಂಬಲ ನೀಡುತ್ತಿದೆ. ಅದಕ್ಕೆಂದೇ, ಈ ಅಕ್ರಮಗಳನ್ನು ಬಯಲಿಗೆಳೆಯಲು ಹೊರಟ ರೂಪಾ ಪ್ರಾಮಾಣಿಕತೆಗೆ, ವರ್ಗಾವಣೆಯ ಶಿಕ್ಷೆ ನೀಡಿದೆ. ಇದು ನಿಜಕ್ಕೂ ಖಂಡನೀಯ. ಸರ್ಕಾರ ಮೊದಲು, ರೂಪಾ ಹೊರಿಸಿದ್ದ ಆರೋಪದ ಸತ್ಯಾಸತ್ಯತೆಯ ಕುರಿತು ವಿಚಾರಣೆ ನಡೆಸಬೇಕಿತ್ತು. ಆದರೆ ಈ ಸರ್ಕಾರ ಇರುವುದೇ ಅಕ್ರಮಗಳನ್ನು ಬೆಂಬಲಿಸುವುದಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಹೇಳಿದರು.
ಡಿಐಜಿ ರೂಪಾ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಗತೆಗೆದುಕೊಂಡ ನಿರ್ಧಾರವನ್ನು ರಾಜ್ಯದ ಹಲವು ಮುಖಂಡರು ಖಡಕ್ ಆಗಿ ವಿರೋಧಿಸಿದ್ದಾರೆ.
Comments