ಖಾಕಿಗಳ ಕಚ್ಚಾಟ ಸರ್ಕಾರದ ದಿವಾಳಿತನ ಬಯಲು ಹೆಚ್ಡಿಕೆ ಟೀಕೆ
ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಹಣಕ್ಕಾಗಿ ಜಗಳವಾಡಿಕೊಂಡಿದ್ದಾರೆ. ಇದರಿಂದ ರಾಜ್ಯದ ಮರ್ಯಾದೆ ದೇಶದಲ್ಲಿ ಹರಾಜಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಇಬ್ಬರು ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಸರ್ಕಾರದ ಆಡಳಿತದ ದಿವಾಳಿತನವನ್ನು ಈ ಅಧಿಕಾರಿಗಳ ಕಚ್ಚಾಟ ಬಯಲು ಮಾಡಿದೆ. ಈ ಅಧಿಕಾರಿಗಳು ಮಾಧ್ಯಮದವರ ಮುಂದೆ ಮಾತನಾಡಲು ನಿಯಮಾವಳಿಗಳಲ್ಲಿ ಅವಕಾಶವಿದೆಯೇ? ಕೂಡಲೇ ಈ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಲಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾರಾಗೃಹದ ಡಿಜಿಪಿ ಸತ್ಯನಾರಾಯಣ ರಾವ್, ಡಿಐಜಿ ರೂಪಾ ಇವರುಗಳು ಕಿತ್ತಾಡಿಕೊಂಡಿರುವುದು ಹಣಕ್ಕಾಗಿ. ಪ್ರತಿತಿಂಗಳು 1 ಕೋಟಿ ರೂ.ಗಳನ್ನು ಕಾರಾಗೃಹದ ಅಧಿಕಾರಿಗಳು ಇವರಿಗೆ ಮಾಮೂಲು ತಂದುಕೊಡಬೇಕು ಎಂದು ಫರ್ಮಾನು ಹೊರಡಿಸಲಾಗಿದೆ. ಅದರಲ್ಲಿ 25 ಲಕ್ಷ ರೂ. ಡಿಐಜಿಗೆ ಹೋಗಬೇಕು. ಆ ಹಣವನ್ನು ಡಿಜಿಪಿಯೇ ಪಡೆಯುತ್ತಿರುವುದಕ್ಕೆ ಇಷ್ಟೆಲ್ಲಾ ರಾದ್ಧಾಂತವಾಗಿದೆ ಎಂದು ಅವರು ಹೇಳಿದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಕಾರಾಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಶಶಿಕಲಾ ಅವರಿಂದ 2 ಕೋಟಿ ರೂ. ಪಡೆದಿರುವ ಜತೆಗೆ ಪ್ರತಿ ತಿಂಗಳು 10 ಲಕ್ಷವನ್ನು ಮಾಮೂಲು ನೀಡುವಂತೆಯೂ ಹೇಳಲಾಗಿದೆ ಎಂಬ ಮಾಹಿತಿಯೇ ಇದೆ.
ಸರ್ಕಾರಕ್ಕೆ ಅಧಿಕಾರಿಗಳನ್ನು ಹಿಡಿತ ಇಲ್ಲದಿದ್ದರೆ ಇದೆಲ್ಲ ಆಗುತ್ತದೆ. ದುಡ್ಡು ಮತ್ತು ಜಾತಿ ನೋಡಿ ಹುದ್ದೆ ನೀಡಿದರೆ ಹೀಗೆಯೇ ಆಗುವುದು ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆಯ ಗೌರವ ಉಳಿಯಬೇಕು ಎಂಬ ಆಸೆಯಿದ್ದರೆ ಈ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಬೇಕು. ತನಿಖೆ ನಿಷ್ಪಕ್ಷಪಾತವಾಗಿರಬೇಕು. ಸಚಿವ ಜಾರ್ಜ್ ಪ್ರಕರಣದಲ್ಲಿ ಡಿರಿಪೋರ್ಟ್ ಹಾಕಿ ಮತ್ತೆ ಅವರನ್ನು ಸಚಿವರನ್ನಾಗಿ ಮಾಡಿಕೊಂಡ ರೀತಿಯಲ್ಲಿ ಒಂದಂಕಿ, ಕ್ರಿಕೆಟ್ ಬೆಟ್ಟಿಂಗ್, ರೀತಿಯಲ್ಲಿ ತನಿಖೆ ನಡೆಸಿದರೆ ಪ್ರಯೋಜನವಿಲ್ಲ. ಒಬ್ಬ ಐಎಎಸ್ ಅಧಿಕಾರಿ ಮನೆಯಲ್ಲಿ 5 ಕೋಟಿ ಹಣ ಸಿಕ್ಕಿತ್ತು. ಈಗ ಅದೇ ಅಧಿಕಾರಿ ರೇರಾ ಕಾಯ್ದಿದೆಯ ಉಸ್ತುವಾರಿ ಇದು ಸಿದ್ದರಾಮಯ್ಯ ಆಡಳಿತದ ಪಾರದರ್ಶಕತೆ ಎಂದು ವ್ಯಂಗ್ಯವಾಡಿದರು.
Comments