ಸಾವಿರ ಮೆ.ವ್ಯಾ. ವಿದ್ಯುತ್ ಖರೀದಿಗೆ ನಿರ್ಧಾರ: ಡಿ.ಕೆ.ಶಿ
ಮುಂದಿನ ದಿನಗಳಲ್ಲಿ ತುರ್ತು ನಿರ್ವಹಣೆ ಉದ್ದೇಶಕ್ಕಾಗಿ 1,000 ಮೆ.ವ್ಯಾ. ಅಲ್ಪಾವಧಿ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ
ರಾಜ್ಯದಲ್ಲಿ ಮಳೆಯ ಅಭಾವ, ಜೊತೆಗೆ ಕಲ್ಲಿದ್ದಲು ಕೊರತೆ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಒಂಬತ್ತು ತಿಂಗಳ ಅವಧಿಗೆ 1,000 ಮೆಗಾವ್ಯಾಟ್ ಅಲ್ಪಾವಧಿ ವಿದ್ಯುತ್ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಬೇಡಿಕೆ ಇರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆಯಾದರೂ ಮೂರು ತಿಂಗಳ ಬಳಿಕ ಉತ್ಪಾದನೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ವಿದ್ಯುತ್ ಖರೀದಿ ಸಂಬಂಧ ಸದ್ಯದಲ್ಲೇ ಟೆಂಡರ್ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ "ವಿದ್ಯುತ್ ಸ್ಥಿತಿಗತಿ' ಪರಾಮರ್ಶೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಪ್ರಸಕ್ತ ವರ್ಷದಲ್ಲಿ ಈವರೆಗಿನ ಮಳೆಯ ಪ್ರಮಾಣ ಕಳೆದ 3 ವರ್ಷಗಳಲ್ಲಿ ಇದೇ ಅವಧಿಯಲ್ಲಿನ ಮಳೆಯ ಪ್ರಮಾಣಕ್ಕಿಂತ ಕಡಿಮೆ ಇದೆ. ಹಾಗಾಗಿ, ಮುಂದಿನ ದಿನಗಳಲ್ಲಿ ತುರ್ತು ನಿರ್ವಹಣೆ ಉದ್ದೇಶಕ್ಕಾಗಿ 1,000 ಮೆ.ವ್ಯಾ. ಅಲ್ಪಾವಧಿ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
Comments