ಕುಮಾರಸ್ವಾಮಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ: ಎಚ್ಡಿಡಿ

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ 'ಪ್ರಜ್ವಲ್ ಕ್ಷಮೆ ಕೇಳಿದ್ದಾನೆ, ಚಿಕ್ಕಪ್ಪನ ನಿರ್ಣಯಕ್ಕೆ ಬದ್ಧ ಎಂದಿದ್ದಾನೆ. ನನಗೆ ನಿಖಿಲ್ ಬೇರೆಯಲ್ಲ, ಪ್ರಜ್ವಲ್ ಬೇರೆಯಲ್ಲ, ಇದನ್ನು ಮುಂದುವರೆಸುವುದು ಬೇಡ' ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
ಹಾಸನದಲ್ಲಿ ನನ್ನ ಗೆಲುವಿನ ಕಾರಣನಾದ ಪ್ರಜ್ವಲ್ ಸ್ವಲ್ಪ ಆಕ್ರೋಶದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾನೆ. ಆದರೆ, ಈಗ ತನ್ನ ತಪ್ಪು ತಿದ್ದಿಕೊಂಡಿದ್ದಾನೆ. ಕುಮಾರಸ್ವಾಮಿ ಬಯಸಿದರೆ ರಾಜಕೀಯದಿಂದಲೇ ದೂರ ಉಳಿಯುವ ಮಾತನಾಡಿದ್ದಾನೆ. ಹಾಸನ ರಾಜಕೀಯವನ್ನು ರೇವಣ್ಣ ಹಾಗೂ ಪ್ರಜ್ವಲ್ ಇನ್ಮುಂದೆ ನೋಡಿಕೊಳ್ಳುತ್ತಾರೆ ಎಂದು ನಾನು ಈ ಹಿಂದೆ ಹೇಳಿದ್ದಕ್ಕೆ ಬದ್ಧನಾಗಿದ್ದೇನೆ.
ರಾಜಕೀಯವಾಗಿ ಪ್ರಜ್ವಲ್ ಇನ್ನೂ ಬೆಳೆಯಬೇಕಿದೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಮುಂದಿನ ಚುನಾವಣೆಯನ್ನು ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ಜೆಡಿಎಸ್ ಎದುರಿಸಲಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲಬೇಡ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
Comments