ಇನ್ಮುಂದೆ ಮಾದರಿ ಗ್ರಾಮದಲ್ಲಿ 24x7 ಕರೆಂಟ್: ಡಿಕೆಶಿ
ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಸಹಿತ 'ವಿದ್ಯುತ್ ಅಚಡಣೆ ರಹಿತ ಗ್ರಾಮ'ಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ
ಬೆಂಗಳೂರು: ರಾಜ್ಯದ ಪ್ರತಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರದ ತಲಾ ಐದು ಗ್ರಾಮಗಳನ್ನು ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಸಹಿತ 'ವಿದ್ಯುತ್ ಅಚಡಣೆ ರಹಿತ ಗ್ರಾಮ'ಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ. ಪ್ರತಿ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಂಡು ಮಾದರಿ ಗ್ರಾಮಗಳನ್ನಾಗಿ ಮಾಡುವುದು ಇದರ ಉದ್ದೇಶ. ಜತೆಗೆ ಐದು ಎಸ್ಕಾಂ ವ್ಯಾಪ್ತಿಯ ಆಯ್ದ ನಗರ ಪ್ರದೇಶ ಒಳಗೊಂಡ ಹದಿನೇಳು ಉಪವಿಭಾಗಗಳನ್ನೂ ಇದೇ ರೀತಿ ಮಾದರಿಯಾಗಿ ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ 3,675 ಕೋಟಿ ರೂ. ಮೀಸಲಿಡಲಾಗಿದೆ.
ರಾಜ್ಯದ ಐದು ಎಸ್ಕಾಂ ವ್ಯಾಪ್ತಿಯ ಆಯ್ದ 17 ಉಪ ವಿಭಾಗಗಳನ್ನು ಒಟ್ಟು 3,675 ಕೋಟಿ ರೂ. ವೆಚ್ಚದಲ್ಲಿ ಮಾದರಿ ಉಪವಿಭಾಗ ಯೋಜನೆಯಡಿ ಅಭಿವೃದ್ಧಿ ಹಾಗೂ ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಲಾ ಐದು ಗ್ರಾಮಗಳನ್ನು ಮಾದರಿ ವಿದ್ಯುತ್ ಗ್ರಾಮಗಳನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ. ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆ, ತಾಂತ್ರಿಕ ಹಾಗೂ ವಾಣಿಜ್ಯ ವಿದ್ಯುತ್ ಸೋರಿಕೆ ಪ್ರಮಾಣ ಶೇ.6ಕ್ಕೆ ಇಳಿಕೆ, ಶೇ.100ರಷ್ಟು ಬಿಲ್ಲಿಂಗ್ - ವಸೂಲಿ, ಐದು ಸ್ಟಾರ್ಗಳಿರುವ ಗುಣಮಟ್ಟದ ಟ್ರಾನ್ಸ್ಫಾರ್ಮರ್ ಅಳವಡಿಕೆ ಹಾಗೂ ಗ್ರಾಹಕರ ಸಂತೃಪ್ತಿಗೆ ಆದ್ಯತೆ ನೀಡುವುದು ಯೋಜನೆಯ ಉದ್ದೇಶ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
Comments