ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ : ಹೆಚ್ಡಿಕೆ ಆಕ್ರೋಶ
ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮೊದಲು ಒಣಗಿರುವ ನಮ್ಮ ಕೆರೆಗಳಿಗೆ ನೀರು ತುಂಬಿಸಿ. ಆಮೇಲೆ ತಮಿಳುನಾಡಿಗೆ ನೀರು ಬಿಡಿ ಎಂದು ಒತ್ತಾಯಿಸಿದ್ದಾರೆ.
ನಗರದ ಜೆ.ಪಿ.ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೂತ್ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ನೆಪವೊಡ್ಡಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ ಎಂದರು.
ತಮಿಳುನಾಡಿನವರೇನೂ ಸುಮ್ಮನಿರುವುದಿಲ್ಲ. ಅವರು ಕೇಳದೆ ಈಗ ನೀರು ಬಿಡುತ್ತಿದ್ದೀರಿ. ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗುವ ಅವರು, ನ್ಯಾಯಾಲಯದ ಆದೇಶವನ್ನೂ ತರುತ್ತಾರೆ. ಆಗ ನೀರು ಬಿಡಲೇಬೇಕಾಗುತ್ತದೆ. ಕೆಆರ್‍ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಿಗೆ ಕಳೆದ ಕೆಲವು ದಿನಗಳಿಂದ ಆದ ಅಲ್ಪಸ್ವಲ್ಪ ಮಳೆಯಿಂದ ಒಳಹರಿವು ಹೆಚ್ಚಾಗಿದೆ. ಇದನ್ನೇ ಒಣಗಿರುವ ಕೆರೆ-ಕಟ್ಟೆಗಳಿಗೆ ತುಂಬಿಸಿ. ರೈತರಿಗೂ ನೆರವಾಗುತ್ತದೆ. ಇಲ್ಲದಿದ್ದರೆ, ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಅವರ ಪರ ನಾವೇ ನಿಲ್ಲುತ್ತೇವೆ ಎಂದು ಗುಡುಗಿದರು.
Comments