ರಾಮನಗರದಿಂದಲೇ ನನ್ನ ಸ್ಪರ್ಧೆ ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ರಾಮನಗರದಿಂದಲೇ ನನ್ನ ಸ್ಪರ್ಧೆ ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ. ಉತ್ತರ ಕರ್ನಾಟಕದಿಂದಲೂ ಸ್ಪರ್ಧೆ ಮಾಡುವಂತೆ ಒತ್ತಡವಿದೆ. ಈ ವಿಷಯವಾಗಿ ಸಮಯ ಬಂದಾಗ ಸೂಕ್ತ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದಲ್ಲಿ ಅಭ್ಯರ್ಥಿಯಾಗಲು ಎಲ್ಲಾ ಕಡೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಟಿಕೆಟ್ ಕೊಡಲಾಗುವುದಿಲ್ಲ. ಆದರೆ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಭಿನ್ನಾಭಿಪ್ರಾಯಗಳನ್ನು ದೂರಸರಿಸಿ ಸಮಾಧಾನಪಡಿಸುವ ಕಾರ್ಯದಲ್ಲಿ ತೊಡಗಿದ್ದೇನೆ ಎಂದರು.
ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲವಿದೆಯಷ್ಟೇ, ಬಂಡಾಯಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಪಕ್ಷದೊಳಗೆ ಸಣ್ಣಪುಟ್ಟ ಸಮಸ್ಯೆಗಳಿವೆ. ಅವೆಲ್ಲವೂ ಬಗೆಹರಿಸಲಾಗದಷ್ಟು ಕ್ಲಿಷ್ಟಕರ ಸಮಸ್ಯೆಗಳಲ್ಲ. ಸದ್ಯದಲ್ಲೇ ಅದೆಲ್ಲವನ್ನೂ ತೀರ್ಮಾನ ಮಾಡಲಾಗುವುದು. ಜಿ.ಟಿ.ದೇವೇಗೌಡರು ಪಕ್ಷದಲ್ಲಿ ಸರಿಯಾಗೇ ಇದ್ದಾರೆ. ಮುಂದೆ ಅವರು ಸರಿಹೋಗುತ್ತಾರೆ ಎಂದು ಚುಟುಕಾಗಿ ಉತ್ತರಿಸಿದರು.
ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಪ್ರಶ್ನಿಸಿದಾಗ, ವಿಶ್ವನಾಥ್ ಇನ್ನೂ ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟಿಲ್ಲ. ಅವರು ರಾಜೀನಾಮೆ ನೀಡಿದ ಬಳಿಕ ಜೆಡಿಎಸ್ ಸೇರುವ ಪ್ರಶ್ನೆ ಉದ್ಭವವಾಗುತ್ತದೆ. ಈ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಜೆಡಿಎಸ್ ಸೇರುವ ಆಕಾಂಕ್ಷೆಯನ್ನೂ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು. ಅದಕ್ಕೆ ಮುಂದಿನ ತಿಂಗಳಲ್ಲಿ ವೇದಿಕೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ ಎಂದರು.
ಜೆಡಿಎಸ್ ಪಕ್ಷಕ್ಕೆ ಬರೋರು, ಹೋಗೋರು ಮಾಮೂಲಿ. ಅದು ಚುನಾವಣೆ ಸಂದರ್ಭದಲ್ಲಿ ನಡೆಯುವ ಪ್ರಕ್ರಿಯೆ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನುಡಿದರು.
ಸಾಲ ಮನ್ನಾ ಮಾಡಲಿಲ್ಲ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡಲಿಲ್ಲ. ಆ ಸಮಯದಲ್ಲಿ ಸಾಲ ಮನ್ನಾ ಮಾಡಿ ಎಂದರೆ ನನಗೆ ನೋಟ್ ಪ್ರಿಂಟ್ ಮಾಡೋ ಮೆಷಿನ್ ಕೊಟ್ಟಿಲ್ಲ ಅಂದಿದ್ರು. ಈಗ ನಾವು ಅಧಿಕಾರಕ್ಕೆ ಬಂದರೆ ಸಹಕಾರ ಬ್ಯಾಂಕ್‍ನ ಸಾಲ ಮನ್ನಾ ಮಾಡುವುದಾಗಿ ಹೇಳ್ತಿದ್ದಾರೆ. ಬಹುಶಃ ಮೋದಿ ನೋಟ್ ಪ್ರಿಂಟ್ ಮಾಡೋ ಮೆಷಿನ್ ಕೊಟ್ಟಿರಬಹುದು. ಅದಕ್ಕಾಗಿ ಅವರು ಹಾಗೆ ಹೇಳಿರಬಹುದು ಎಂದು ವ್ಯಂಗ್ಯವಾಡಿದರು.
ಗೋ ಹತ್ಯೆ ನಿಷೇಧದ ವಿಚಾರವಾಗಿ ಚರ್ಚೆ ಮಾಡುವ ಗೋಜಿಗೆ ಹೋಗೋಲ್ಲ. ರೈತರ ಮೇಲೆ ಹೊರೆ ಹಾಕಬೇಡಿ. ವಯಸ್ಸಾದ ದನಗಳ ಖರೀದಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Comments