ಇನ್ನು ಮುಂದೆ ವಾಟ್ಸ್‌ಆಪ್ ಪೇಮೆಂಟ್ ಸೇವೆ ಮಾಡಬಹುದು..!
ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿಯು ಭಾರತದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಮುಖಾಂತರ ಹಣ ವರ್ಗಾವಣೆ ಮಾಡುವ ವಿಶೇಷತೆಯನ್ನು ಆ್ಯಪ್ಗೆ ಸೇರಿಸಿದೆ. ಈ ಹೊಸ ವಿಶೇಷತೆಯನ್ನು ಐಓಎಸ್ ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ.
ಈ ಹೊಸ ವಿಶೇಷತೆಯನ್ನು ವಾಟ್ಸಪ್ 2.18.21 ಐಓಎಸ್ ಮತ್ತು ಆಂಡ್ರಾಯ್ಡ್ಗೆ 2.18.41 ಆವೃತ್ತಿಯ ಆ್ಯಪ್ ಬಳಸುವ ಮಂದಿಗೆ ಸಿಕ್ಕಿದೆ. ನಮಗೆ ಬೇಕಾದ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿ ನಂತರ ಯುಪಿಐಗೆ ಕನೆಕ್ಟ್ ಮಾಡಬೇಕು. ತದನಂತರ ಹೊಸ ಯುಪಿಐ ಖಾತೆ ತೆರೆದು ಪಿನ್ ಸೆಟ್ ಮಾಡಿ, ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಹುದು. ಹಣ ಕಳುಹಿಸುವ ಹಾಗು ಹಣ ಪಡೆದು ಕೊಳ್ಳುವ ವ್ಯಕ್ತಿಗಳಿಬ್ಬರು ಈ ವಿಶೇಷತೆ ಬಳಸಬೇಕಾದರೆ ಆ್ಯಪ್ ಅಪ್‍ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
2017ರ ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ `ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು. ನವೆಂಬರ್ 8ರಂದು ಕೇಂದ್ರ ಸರ್ಕಾರ 1 ಸಾವಿರ ಮತ್ತು 500 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಈಗ ಈ ಕ್ಷೇತ್ರದತ್ತ ಕಣ್ಣುಹಾಕಿದೆ. ಈ ಸಂಬಂಧವಾಗಿ ವಾಟ್ಸಪ್ ಕಂಪೆನಿ ಈ ಹಿಂದೆ ಜಾಹಿರಾತು ಪ್ರಕಟಿಸಿ, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಭೀಮ್ ಆ್ಯಪ್ ಮತ್ತು ಆಧಾರ್ ನಂಬರ್ ಇವುಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ತಿಳಿಸಿತ್ತು.
Comments