ವಿಶ್ವ ದಾಖಲೆ ನಿರ್ಮಾಣದತ್ತ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಪ್ರತಿ ಮ್ಯಾಚ್ ನಲ್ಲೂ ಒಂದೊಂದು ದಾಖಲೆ ಬರೆಯುತ್ತ ಬಂದಿದ್ದಾರೆ. ಅದೇ ರೀತಿ ಇತ್ತೀಚಿಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಗಳ ಸುರಿಮಳೆಯನ್ನೇ ಹರಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಫ್ರಿಕಾ ನೆಲದಲ್ಲಿ ಮತ್ತೊಂದು ವಿನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.
ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ದ್ವಿಪಕ್ಷೀಯ ಸರಣಿಯೊಂದರಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಮತ್ತು ನಾಯಕ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 3 ಶತಕ ಮತ್ತು 1 ಅರ್ಧ ಶತಕ ಸಹಿತ 558 ರನ್ ಕಲೆ ಹಾಕಿದ್ದು, ಈ ಮೂಲಕ ಏಕದಿನ ಸರಣಿಯೊಂದರಲ್ಲಿ ವಿಶ್ವದ ಯಾವುದೇ ಬ್ಯಾಟ್ಸಮನ್ ಕಲೆಹಾಕದ ಅತ್ಯಧಿಕ ರನ್ ಗಳಿಸಿದ ವಿಶ್ವದಾಖಲೆ ಬರೆದಿದ್ದಾರೆ.
ಇದಕ್ಕೂ ಮೊದಲು ರೋಹಿತ್ ಶರ್ಮ 2013ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 6 ಇನಿಂಗ್ಸ್ಗಳಲ್ಲಿ 491 ರನ್ ದಾಖಲಿಸಿದ್ದು ಹಿಂದಿನ ದಾಖಲೆಯಾಗಿತ್ತು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ 2005ರಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಕೆವಿನ್ ಪೀಟರ್ಸೆನ್ 6 ಪಂದ್ಯಗಳಲ್ಲಿ 3 ಶತಕ ಸಹಿತ 454 ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಕೊಹ್ಲಿ ಪೀಟರ್ಸೆನ್ ಮತ್ತು ರೋಹಿತ್ ಶರ್ಮಾ ದಾಖಲೆಯನ್ನೂ ಮುರಿದಿದ್ದಾರೆ.
Comments