ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಸೆಂಚೂರಿಯನ್ ನಲ್ಲಿ ನಡೆದ 2ನೇ ಏಕದಿನ ಪಂದ್ಯದ ಜಯದೊಂದಿಗೆ ಭಾರತ ತನ್ನ ಅಂಕಗಳಿಕೆಯಲ್ಲಿ ಒಂದು ಅಂಕ ಏರಿಕೆ ಮಾಡಿಕೊಳ್ಳುವ ಮೂಲಕ ಅಗ್ರ ಸ್ಥಾನಕ್ಕೇರಿದೆ. ಸರಣಿಗೂ ಮುನ್ನ 120 ಅಂಕಗಳನ್ನು ಹೊಂದಿದ್ದ ಭಾರತ ಇದೀಗ 121 ಅಂಕಗಳನ್ನು ಹೊಂದಿದೆ. ಏಕದಿನ ಸರಣಿ ಆರಂಭಕ್ಕೆ ಮೊದಲು ಭಾರತ ಹಾಗೂ ದಕ್ಷಿಣ ಆಫ್ರಿಕ ತಲಾ 120 ಅಂಕ ಹೊಂದಿದ್ದವು. ಇದೀಗ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕೇವಲ ಒಂದು ಅಂಕ ಮುನ್ನಡೆ ಸಾಧಿಸಿ ತಾತ್ಕಾಲಿಕವಾಗಿ ಅಗ್ರ ಸ್ಥಾನಕ್ಕೇರಿದೆ.
ಸೆಂಚೂರಿಯನ್ ನಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಿದ್ದು, ಭಾರತ ತಂಡ ಅಗ್ರ ಸ್ಥಾನಕ್ಕೇರಿದೆ. ಸರಣಿ ಆರಂಭಕ್ಕೆ ಮೊದಲು ಭಾರತ 4-2 ಅಂತರದಿಂದ ಸರಣಿ ಜಯಿಸಿದರೆ ಅಗ್ರ ಸ್ಥಾನಕ್ಕೇರಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ದಕ್ಷಿಣ ಆಫ್ರಿಕ ಅಗ್ರಸ್ಥಾನ ಕಾಯ್ದುಕೊಳ್ಳಲು ಸರಣಿ ಗೆಲ್ಲಬೇಕು ಅಥವಾ ಡ್ರಾ ಸಾಧಿಸುವ ಅಗತ್ಯವಿತ್ತು. ಆದರೆ ಇದೀಗ ಭಾರತ ಏಕದಿನದಲ್ಲಿ ನಂ.1 ಸ್ಥಾನಕ್ಕೇರಿದ್ದು, ಏಕದಿನ ರ‍್ಯಾಂಕಿಂಗ್ ಗಳಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ 2 ಸ್ಥಾನ ಕಳೆದುಕೊಂಡು ಐದನೇ ಸ್ಥಾನಕ್ಕೆ ಕುಸಿದಿದೆ. ಇಂಗೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 4 ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ರ‍್ಯಾಂಕಿಂಗ್ ನಲ್ಲಿ ಕುಸಿತ ಕಂಡಿದೆ.
ಟಿ20ಯಲ್ಲೂ ಅಗ್ರಸ್ಥಾನಕ್ಕೇರುವ ಅವಕಾಶ : ಇನ್ನು ಈಗಾಗಲೇ ಏಕದಿನ ಮತ್ತು ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ಟ್ವೆಂಟಿ-20 ಮಾದರಿರ‍್ಯಾಂಕಿಂಗ್ ನಲ್ಲೂ ಅಗ್ರ ಸ್ಥಾನಕ್ಕೇರುವ ಅವಕಾಶ ಮುಕ್ತವಾಗಿಸಿಕೊಂಡಿದೆ. ಭಾರತ ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದು, ಮುಂಬರುವ ಟಿ20 ಸರಣಿ ಗೆದ್ದರೆ ಭಾರತ ಟಿ20ಯಲ್ಲೂ ಅಗ್ರ ಸ್ಥಾನಕ್ಕೇರಲಿದೆ.
ಏಕದಿನ ರ‍್ಯಾಂಕಿಂಗ್ ಪಟ್ಟಿ: 1. ಭಾರತ (121 ಅಂಕ), 2. ದ.ಆಫ್ರಿಕ (120), 3.ಇಂಗ್ಲೆಂಡ್ (116), 4. ನ್ಯೂಜಿಲೆಂಡ್(115), 5. ಆಸ್ಟ್ರೇಲಿಯಾ (112), 6.ಪಾಕಿಸ್ತಾನ (96), 7. ಬಾಂಗ್ಲಾದೇಶ (90), 8. ಶ್ರೀಲಂಕಾ (84), 9. ವೆಸ್ಟ್‌ಇಂಡೀಸ್ (76) ಹಾಗೂ 10. ಜಿಂಬಾಬ್ವೆ (53)
Comments