ವಿಶ್ವಕಪ್ ಫೈನಲ್ ತಲುಪಿದ ಭಾರತದ ಕಿರಿಯರು

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಅಂಡರ್19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಭಾರತದ ಕಿರಿಯರು ಫೈನಲ್ ಪ್ರವೇಶಿಸಿದ್ದಾರೆ. ಪಂದ್ಯಾವಳಿಯ ಆರಂಭದಿಂದಲೂ ಒಂದೂ ಪಂದ್ಯ ಸೋಲದೆ ಗುಣಮಟ್ಟದ ಕ್ರಿಕೆಟ್ ಆಡುತ್ತಿರುವ ಈ ಹುಡುಗರು ಭವಿಷ್ಯದ ಭಾರತದ ಕ್ರಿಕೆಟ್ ಕಲಿಗಳು ಎಂದೇ ಬಿಂಬಿತರಾಗುತ್ತಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಹುಡುಗರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದು, ಈ ಬೆಳೆಯುವ ಸಿರಿಗಳಿಗೆ ನೀರು ಉಣಿಸಿ ಆಕಾರ ನೀಡಿ ಬೆಳೆಸುತ್ತಿರುವುದು ಭಾರತದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್. ಭಾರತದ ಅಂಡರ್19 ತಂಡದ ಕೋಚ್ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್. ಭಾರತದ ಅಂಡರ್19 ತಂಡ ಪಾಕಿಸ್ತಾನವನ್ನು ಭರ್ಜರಿಯಾಗಿ ಬಗ್ಗುಬಡಿದು ವಿಶ್ವಕಪ್ ಪೈನಲ್ ಪ್ರವೇಶಿಸುತ್ತಿದ್ದಂತೆ ತಂಡಕ್ಕೆ ಅಭಿನಂದನೆಗಳ ಸುರಿಮಳೆಯನ್ನೇ ಕ್ರಿಕೆಟ್ ಪ್ರಿಯರು ಮಾಡಿದ್ದಾರೆ. ಅಷ್ಟೆ ಮೆಚ್ಚುಗೆಗಳು ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಸಂದಿವೆ. ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ರಾಹುಲ್ ದ್ರಾವಿಡ್ ಅವರನ್ನು ಕೊಂಡಾಡುತ್ತಿದ್ದು, ಕಿರಿಯರ ತಂಡದ ಸಾಧನೆಗೆ ಮೂಲಕ ಕಾರಣಕರ್ತ ರಾಹುಲ್ ಅವರನ್ನು ಇನ್ನಿಲ್ಲದಂತೆ ಕೊಂಡಾಡಲಾಗುತ್ತಿದೆ.
Comments