ಆರ್ ಸಿಬಿ ತಂಡ ಸೇರ್ಪಡೆಗೊಂಡ ಗ್ಯಾರಿ ಕರ್ಸ್ಟನ್, ಆಶೀಶ್ ನೆಹ್ರಾ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚಿಂಗ್ ವಿಭಾಗಕ್ಕೆ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಗ್ಯಾರಿ ಕರ್ಸ್ಟನ್ ಹಾಗೂ ಟೀಂ ಇಂಡಿಯಾದ ಟಿ20 ಸ್ಪೆಷಲಿಸ್ಟ್ ಮಾಜಿ ವೇಗಿ ಆಶೀಶ್ ನೆಹ್ರಾ ಅವರು ಸೇರ್ಪಡೆಯಾಗಿದ್ದಾರೆ.
2011ರ ವಿಶ್ವಕಪ್ ಗೆಲ್ಲಲು ಭಾರತಕ್ಕೆ ನೆರವಾಗಿದ್ದ ಮಾಜಿ ಕೋಚ್ ಗ್ಯಾರಿ ಅವರು ಈ ಹಿಂದೆ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಮೂಲದ ಐಪಿಎಲ್ ತಂಡದ ಮುಖ್ಯ ಕೋಚ್ ಆಗಿ 2016ರ ತನಕ ಕಾರ್ಯ ನಿರ್ವಹಿಸಿರುವ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ ಅವರು ಕೋಚ್ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಗ್ಯಾರಿ ಹಾಗೂ ನೆಹ್ರಾ ಅವರು ಮೆಂಟರ್ ಗಳಾಗಿ,ಜತೆಗೆ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 2016ರಲ್ಲಿ ಐಪಿಎಲ್ ಫೈನಲ್ ತನಕ ತಲುಪಿದ್ದ ಕೊಹ್ಲಿ ಪಡೆ, ಡೇವಿಡ್ ವಾರ್ನರ್ ಅವರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಗ್ಯಾರಿ ಕರ್ಸ್ಟನ್ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಹೋಬರ್ಟ್ ಹರಿಕೇನ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನವೆಂಬರ್ 01ರಂದು ನ್ಯೂಜಿಲೆಂಡ್ ವಿರುದ್ಧದ ಟಿ20ಐ ಪಂದ್ಯದ ನಂತರ ವೇಗಿ ಆಶೀಶ್ ಅವರು ಸುಮಾರು 20 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು.
Comments