ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ವಿರಾಟ್

2017ನೇ ಸಾಲು ಅಂತ್ಯಗೊಂಡಂತೆಯೇ ಐಸಿಸಿ ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಏಕದಿನ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಅಗ್ರ ಸ್ಥಾನದೊಂದಿಗೆ ವಿರಾಟ್ ಕೊಹ್ಲಿ 2017ನೇ ವರ್ಷವನ್ನು ಪೂರ್ಣಗೊಳಿಸಿದ್ದು, ಕೊಹ್ಲಿ ಏಕದಿನ ಮಾತ್ರವಲ್ಲದೇ ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲೂ ಸ್ಥಿರ ಪ್ರದರ್ಶನ ನೀಡುವ ಮೂಲಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮುಲ್ಮುಖವಾಗಿ ಮುನ್ನಡೆದಿದ್ದಾರೆ. ಟೆಸ್ಟ್ ಮತ್ತು ಟಿ-20 ರ‍್ಯಾಂಕಿಂಗ್ ನಲ್ಲಿ ಕೊಹ್ಲಿ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಈ ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದು, ಮೂರು ದ್ವಿಶತಕ ಸಹಿತ ಒಟ್ಟು 5 ಶತಕಗಳನ್ನು ಸಿಡಿಸಿದ್ದಾರೆ. ಪ್ರಸ್ತುತ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅಗ್ರ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಸ್ಮಿತ್ 76 ಹಾಗೂ ಔಟಾಗದೆ 102 ರನ್ ಗಳಿಸಿದ್ದರು. ಇನ್ನು ಇತ್ತೀಚೆಗೆ ಮೆಲ್ಬೋರ್ನ್ ಟೆಸ್ಟ್ನಲ್ಲಿ ಔಟಾಗದೆ ದ್ವಿಶತಕ ದಾಖಲಿಸಿದ್ದ ಅಲಿಸ್ಟರ್ ಕುಕ್ 9 ಸ್ಥಾನ ಬಡ್ತಿ ಪಡೆದು 8ನೇ ಸ್ಥಾನಕ್ಕೇರಿದ್ದಾರೆ.ಅಂತೆಯೇ ಇಂಗ್ಲೆಂಡ್ ನಾಯಕ ಜೋ ರೂಟ್ ಒಂದು ಸ್ಥಾನ ಬಡ್ತಿ ಪಡೆದು ಕಿವೀಸ್ ನ ವಿಲಿಯಮ್ಸನ್ ರೊಂದಿಗೆ ಜಂಟಿ 4ನೇ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಬೌಲರ್ಗಳ ರ‍್ಯಾಂಕಿಂಗ್ ನಲ್ಲಿ ಭಾರತದ ಅವಳಿ ಸ್ಪಿನ್ನರ್ ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ, ಲಂಕಾದ ರಂಗನಾ ಹೆರಾತ್ 2017ರ ಆರಂಭದಲ್ಲಿ ಅಗ್ರ-3 ಸ್ಥಾನಗಳಲ್ಲಿದ್ದರು. ವರ್ಷಾಂತ್ಯಕ್ಕೆ ಕ್ರಮವಾಗಿ 3ನೇ, 4ನೇ ಹಾಗೂ 6ನೇ ಸ್ಥಾನದಲ್ಲಿದ್ದಾರೆ.
Comments