ಇವತ್ತು ನಡೆಯಲಿರುವ ಭಾರತ-ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ ಫಿಕ್ಸ್…?

ಪುಣೆ: ಭಾರತೀಯ ಕ್ರಿಕೆಟ್'ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಪುಷ್ಟೀಕರಿಸುವ ಸುದ್ದಿಯೊಂದು ಬಂದಿದೆ. ಭಾರತದ ಕ್ರಿಕೆಟ್ ಪಿಚ್'ಗಳು ಮಾರಾಟದ ಸರಕಾಗಿರುವ ಆತಂಕಕಾಗಿ ವಿಚಾರವನ್ನು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಹಿರಂಗಗೊಳಿಸಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ 2ನೇ ಏಕದಿನ ಪಂದ್ಯ ನಡೆಯಲಿರುವ ಪುಣೆಯಲ್ಲಿ ಪಿಚ್ ಕ್ಯುರೇಟರ್ ಪಾಂಡುರಂಗ್ ಸಲ್ಗಾಂವ್ಕರ್'ನ ಕರ್ಮಕಾಂಡವನ್ನು ಇಂಡಿಯಾಟುಡೇ ವಾಹಿನಿ ಸ್ಟಿಂಗ್ ಆಪರೇಷನ್ ಮಾಡಿ ಬಯಲಿಗೆ ತಂದಿದೆ. ದುಡ್ಡು ಕೊಡುತ್ತೇನೆನ್ನುವ ಯಾರೇ ಬಂದು ಹೇಳಿದರೂ ಪಿಚ್'ನಲ್ಲಿ ಬದಲಾವಣೆ ಮಾಡುತ್ತಾರಂತೆ ಆ ಆಸಾಮಿ. ಬುಕ್ಕಿಗಳಿಗೆ ಬೇಕಾದ ರೀತಿಯಲ್ಲಿ ಈತ ಪಿಚ್ ತಯಾರಿಸುತ್ತಾನೆನ್ನುವುದು ಈ ಸ್ಟಿಂಗ್ ಆಪರೇಷನ್'ನಿಂದ ತಿಳಿದುಬರುತ್ತದೆ
ಇಂಡಿಯಾಟುಡೇ ವಾಹಿನಿಯ ವರದಿಗಾರರು ಬುಕ್ಕಿಗಳ ವೇಷದಲ್ಲಿ ಹೋಗಿ ಪುಣೆ ಪಿಚ್ ಕ್ಯುರೇಟರ್ ಸಲ್ಗಾಂವ್ಕರ್ ಅವರನ್ನು ಸಂಪರ್ಕಿಸುತ್ತಾರೆ. ಇಬ್ಬರು ಆಟಗಾರರಿಗೆ ಪಿಚ್'ನಲ್ಲಿ ಬೌನ್ಸ್ ಬಯಸುತ್ತಾರೆ. ತಾವು ಅದನ್ನು ಮಾಡಿಕೊಳ್ಳಬಲ್ಲಿರಾ ಎಂದು ಕೇಳಿಕೊಳ್ಳುತ್ತಾರೆ. ಅದಕ್ಕೆ ಪಾಂಡುರಂಗ್ ಸಲ್ಗಾಂವ್ಕರ್ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ವಾಹಿನಿಯ ವರದಿಗಾರರು ಪಿಚ್'ನ್ನು ಪರಿಶೀಲಿಸಲೂ ಕ್ಯುರೇಟರ್ ಒಪ್ಪಿಕೊಳ್ಳುತ್ತಾರೆ. ಜೊತೆಗೆ, ಈಗಿರುವ ಪಿಚ್'ನ ವರ್ತನೆ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಈ ಪಿಚ್'ನಲ್ಲಿ 337-340 ರನ್ ಗಳಿಸಲು ಸಾಧ್ಯ. 337 ರನ್ ಮೊತ್ತವನ್ನು ಚೇಸ್ ಕೂಡ ಮಾಡಬಲ್ಲಷ್ಟು ಬ್ಯಾಟಿಂಗ್ ವಿಕೆಟ್ ಇದಾಗಿದೆ ಎಂಬ ಮಾಹಿತಿಯನ್ನು ಕ್ಯುರೇಟರ್ ನೀಡುತ್ತಾರೆ. ಇದೆಲ್ಲವೂ ಸ್ಟಿಂಗ್ ಆಪರೇಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಂಡಿಯಾಟುಡೇ ವಾಹಿನಿ ಇದನ್ನು ಬಿತ್ತರಿಸಿದೆ.
ಕ್ರಿಕೆಟ್ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಆರೋಪಗಳು ಮತ್ತು ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಇಂಡಿಯಾಟುಡೇ ಕುಟುಕು ಕಾರ್ಯಾಚರಣೆಯು ಕ್ರಿಕೆಟ್'ನ ವಾಸ್ತವ ಸ್ಥಿತಿಯನ್ನು ತೋರಿಸಿ ಎಚ್ಚರಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯವು ಇಂದು ಪುಣೆಯಲ್ಲಿ ನಡೆಯಲಿದೆ. ಮೊದಲನೇ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಟ್ಟಿರುವ ಭಾರತ ತಂಡಕ್ಕೆ ಈ ಎರಡನೇ ಪಂದ್ಯ ಬಹಳ ಮಹತ್ವದ್ದಾಗಿದೆ.
Comments