3ನೇ ಟಿ20ಯಿಂದ ಧೋನಿಯನ್ನು ಹೊರಗಿಡಿ ಎಂದ ಪ್ಲೇಯರ್ ಯಾರು ಗೊತ್ತಾ?

ಹೈದರಾಬಾದ್ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ 20 ಪಂದ್ಯ ಇಂದು ನಡೆಯಲಿದೆ. ಎರಡೂ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಹೀಗಿರುವಾಗ ಇಂದು ನಡೆಯಲಿರುವ ಮೂರನೇ ಪಂದ್ಯ ನಿರ್ಣಾಯಕ ಪಂದ್ಯವಾಗಿದ್ದು, ವಿಶ್ವದ ಗಮನ ಸೆಳೆದಿದೆ. ಅತ್ತ ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್ 11 ನಲ್ಲಿ ಯಾವುದೇ ಬದಲಾವಣೆ ತರುತ್ತಿಲ್ಲವಾದರೂ, ಇತ್ತ ಟೀಂ ಇಂಡಿಯಾ ಗುವಾಹಟಿಯಲ್ಲಿ ಸಿಕ್ಕ ಸೋಲಿನಿಂದ ಪ್ಲಢೇಯಿಂಗ್ 11 ಆರ್ಡರ್'ನ್ನು ಬದಲಾಯಿಸಲು ಸಜ್ಜಾಗಿದೆ.
ವೇಗಿ ಬೌಲರ್ ಆಶೀಶ್ ನೆಹ್ರಾ ಬುಧವಾರದಂದು ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ. ಹೀಗಿರುವಾಗ ಅವರಿಗೆ ಈ ಬಾರಿಯ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗಬಹುದು. ಭುವನೇಶ್ವರ್ ಇಲ್ಲವೇ ಬುಮ್ರಾ ಸ್ಥಾನದಲ್ಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಆದರೀಗ ಮಾಜಿ ಕ್ರಿಕೆಟಿಗರೊಬ್ಬರು ಧೋನಿಯನ್ನು ಹೊರಗಿಟ್ಟು ದಿನೇಶ್ ಕಾರ್ತಿಕ್'ನನ್ನು ಅವರ ಸ್ಥಾನದಲ್ಲಿ ಆಡಿಸಬೇಕೆಂಬ ಸಲಹೆ ನೀಡಿದ್ದಾರೆ.
ಟೀಂ ಇಂಡಿಯಾದ ಮಾಜಿ ವೇಗಿ ಬೌಲರ್ ಅಜಿತ್ ಅಗರ್ಕರ್ ಈ ಕುರಿತಾಗಿ ಮಾತನಾಡುತ್ತಾ 'ಮೂರನೇ ಹಾಗೂ ಕೊನೆಯ ಟಿ 20 ಪಂದ್ಯದಲ್ಲಿ ಧೋನಿಯ ಬದಲಾಗಿ ದಿನೇಶ್ ಕಾರ್ತಿಕ್'ಗೆ ಆಡಲು ಅವಕಾಶ ಕೊಡಬೇಕು' ಎಂದಿದ್ದಾರೆ. ಇನ್ನು ಇದಕ್ಕೆ ಕಾರಣ ನೀಡಿರುವ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಉತ್ತಮ ಟಚ್ ಹೊಂದಿದ್ದಾರೆ, ಅಲ್ಲದೇ ಮೊದಲ ಬಾಲ್'ಗೇ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ ದಾಳಿ ನಡೆಸುತ್ತಾರೆ. ಆದರೆ ವಿರಾಟ್ ಕೊಹ್ಲಿ ಈ ಬದಲಾವಣೆ ತರುವುದಿಲ್ಲ ನನಗೆ ತಿಳಿದಿದೆ. ಆದರೆ ನನ್ನ ಪ್ರಕಾರ ತಂಡದಲ್ಲಿ ಧೋನಿಯ ಬದಲಾಗಿ ದಿನೇಶ್ ಕಾರ್ತಿಕ್'ನನ್ನು ಆಯ್ಕೆ ಮಾಡುವುದು ಒಳಿತು' ಎಂದು ತಿಳಿಸಿದ್ದಾರೆ. ಇದರೊಂದಿಗೆ ನೆಹ್ರಾಗೂ ಈ ಪಂದ್ಯದಲ್ಲಿ ಆಡುವ ಅವಕಾಶ ನೀಡಬೇಕೆಂಬ ಅಭಿಪ್ರಾಯ ನೀಡಿದ್ದಾರೆ.
ಆದರೆ ಗುವಾಹಟಿಯಲ್ಲಿ ಸಿಕ್ಕ ಸೋಲಿನ ಬಳಿಕ, ಇಂದು ಹೈದರಾಬಾದ್'ನಲ್ಲಿ ನಡೆಯಲಿರುವ ಮೂರನೇ ಹಾಗೂ ನಿರ್ಣಾಯಕ ಪಂದ್ಯದ ಪ್ಲೇಯಿಂಗ್ 11 ಆರ್ಡರ್'ನಲ್ಲಿ ಕ್ಯಾಪ್ಟನ್ ಕೊಹ್ಲಿ ಯಾವುದಾದರೂ ಬದಲಾವಣೆ ತರುತ್ತಾರಾ ಕಾದು ನೋಡಬೇಕು.
Comments