ಗೌತಮ್ ಬಿಸಿಸಿಐ ಗೆ ಕ್ಷಮೆ ಕೋರಿದ್ದಾದರೂ ಏಕೆ ?
ದುಲೀಪ್ ಟ್ರೋಫಿ ಮೊದಲ ಪಂದ್ಯದ ವೇಳೆ ಭಾರತ ರೆಡ್ ತಂಡದಲ್ಲಿ ಆಡಿ 5 ವಿಕೆಟ್ ಕಬಳಿಸಿದ್ದ ಗೌತಮ್, ಪಂದ್ಯದ ಬಳಿಕ ಟೈಫಾಯ್ಡ್ ಕಾರಣ ಬೆಂಗಳೂರಿಗೆ ವಾಪಸಾಗಿದ್ದರು. ನಂತರ ಕರ್ನಾಟಕ ಪ್ರೀಮಿಯರ್ ಲೀಗ್'ನಲ್ಲಿ ಆಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕಾರಣ ಅವರನ್ನು ದುಲೀಪ್ ಟ್ರೋಫಿ ಹಾಗೂ ಭಾರತ 'ಎ' ತಂಡಗಳಿಂದ ಕೈಬಿಡಲಾಗಿತ್ತು.
ಆದರೆ ಇದೀಗ ಕರ್ನಾಟಕದ ಆಫ್ ಸ್ಪಿನ್ನರ್ ಕೆ. ಗೌತಮ್ ಬಿಸಿಸಿಐ ಬೇಷರತ್ತಾದ ಕ್ಷಮೆ ಕೋರಿದ್ದಾರೆ. ಗೌತಮ್ ಕ್ಷಮೆ ಕೋರಿ ಬರೆದಿರುವ ಪತ್ರವನ್ನು ಬಿಸಿಸಿಐ, ತನ್ನ ಶಿಸ್ತು ಸಮಿತಿಗೆ ತಲುಪಿಸಿದೆ. ಗೌತಮ್ ಮುಂದಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದೋ ಇಲ್ಲವೋ ಎನ್ನುವುದನ್ನು ಶಿಸ್ತು ಸಮಿತಿ ನಿರ್ಧರಿಸಲಿದೆ. ಬಿಸಿಸಿಐ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ಗೌತಮ್'ಗೆ ಶೋಕಾಸ್ ನೋಟಿಸ್ ನೀಡಿದ್ದರು. ಸದ್ಯ ಕ್ಷಮೆ ಕೋರಿರುವ ಗೌತಮ್ ತಾವು ಕೆಪಿಎಲ್ ಪಂದ್ಯದಲ್ಲಿ ಆಡಿದ್ದಕ್ಕೆ ವಿವರಣೆ ನೀಡಿದ್ದಾರೆ. 'ನಾನು ಟೈಫಾಯ್ಡ್ ಅಂದುಕೊಂಡಿದ್ದೆ. ಆದರೆ ಅದು ವೈರಾಣು ಜ್ವರ ಎಂದು ನನಗೆ ನಂತರ ತಿಳಿಯಿತು' ಎಂದು ಬರೆದಿದ್ದಾರೆ. ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಜ್ಯೋತಿರಾದಿತ್ಯ ಸಿನ್ಹಾ ಹಾಗೂ ನಿರಂಜನ್ ಶಾ ಅವರನ್ನೊಳಗೊಂಡ ಶಿಸ್ತು ಸಮಿತಿ, ಗೌತಮ್ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
Comments