ಕನ್ನಡದ ಕ್ರಿಕೆಟ್ ಪ್ರತಿಭೆ ರಾಜೇಶ್ವರಿ ಗಾಯಕ್ವಾಡ್ ತಂದೆಯನ್ನು ಹೊಗಳಿದ ಸಚಿನ್
ಏಕದಿನ ಕ್ರಿಕೆಟ್ ನಲ್ಲಿ ಸಾಧನೆ ಮಾಡಿರುವ ರಾಜ್ಯದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರ ತಂದೆಯನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಟ್ವಿಟ್ಟರ್ ನಲ್ಲಿ ಹಾಡಿ ಹೊಗಳಿದ್ದಾರೆ.ಸದ್ಯಕ್ಕೀಗ, ಭಾರತೀಯ ಮಹಿಳಾ ತಂಡದೊಂದಿಗೆ ಲಂಡನ್ ನಲ್ಲಿರುವ ಅವರು, ಕಳೆದ 29 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 53 ವಿಕೆಟ್ ಗಳಿಸಿದ್ದಾರೆ. ಅಲ್ಲದೆ, ಪ್ರತಿ ಓವರ್ ಗೆ 3.3 ರನ್ ಮಾತ್ರ ನೀಡಿ ಇಷ್ಟು ವಿಕೆಟ್ ಕಬಳಿಸಿರುವುದು ಭಾರತೀಯ ಮಹಿಳಾ ಕ್ರಿಕೆಟ್ ರಂಗದಲ್ಲೇ ವಿಶಿಷ್ಟ ಸಾಧನೆಯೆನಿಸಿದೆ.
ಈ ಹಿನ್ನೆಲೆಯಲ್ಲಿ, ತಮ್ಮ ಮಗಳನ್ನು ಕ್ರೀಡಾಪಟುವಾಗಿ ರೂಪಿಸಿದ ರಾಜೇಶ್ವರಿ ಅವರ ತಂದೆಯನ್ನು ಸಚಿನ್ ಹೊಗಳಿದ್ದಾರೆ. ಮಗಳಲ್ಲಿನ ಕ್ರೀಡಾಪ್ರತಿಭೆಯನ್ನು ಗುರುತಿಸಿದ್ದರಿಂದಲೇ ರಾಜೇಶ್ವರಿ ಅವರು ಇಂಥ ಸಾಧನೆ ಮಾಡಲು ಸಾಧ್ಯವಾಗಿದೆ. ಇಂಥ ತಂದೆಯನ್ನು ಪಡೆದ ರಾಜೇಶ್ವರಿ ತುಂಬಾ ಅದೃಷ್ಟವಂತೆ ಎಂದಿದ್ದಾರೆ ಅವರು.
ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಜೇಶ್ವರಿ, ಮೊದಲಿಗೆ ಜ್ಯಾವೆಲಿನ್ ತ್ರೋನಲ್ಲಿ ಪರಿಣತಿ ಪಡೆದು ಆನಂತರ ಕ್ರಿಕೆಟ್ ಗೆ ಕಾಲಿಟ್ಟಿದ್ದರು.
Comments