ಕೋಚ್ ಹುದ್ದೆಯಲ್ಲಿ ಕುಂಬ್ಳೆಯನ್ನೇ ಮುಂದುವರಿಸಲು ಸಿಎಸಿ ಒಲವು

ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಅವರನ್ನು ಒಳಗೊಂಡಿರುವ ಕ್ರಿಕೆಟ್ ಸಲಹಾ ಸಮಿತಿ ಅನಿಲ್ ಕುಂಬ್ಳೆ ಅವರನ್ನೇ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿದೆ. ನಿನ್ನೆ ತಡರಾತ್ರಿ ಈ ಮೂವರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಅನಿಲ್ ಕುಂಬ್ಳೆ ಅವರ ಬದಲು ಬೇರೊಬ್ಬರನ್ನು ತರಬೇತುದಾರರಾಗಿ ನೇಮಕ ಮಾಡಲು ಸಮಿತಿಯ ಯಾವೊಬ್ಬ ಸದಸ್ಯರೂ ಆಸಕ್ತಿ ತೋರಿಲ್ಲ. ಕುಂಬ್ಳೆ ಬದಲು ರವಿ ಶಾಸ್ತ್ರಿ ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.
ಅನಿಲ್ ಕುಂಬ್ಳೆ ಹುದ್ದೆಯಲ್ಲಿ ಮುಂದುವರಿದರೆ ಅಥವಾ ಹೊಸ ಕೋಚ್ ಆಯ್ಕೆಯಾದಲ್ಲಿ 2019ರ ವಿಶ್ವಕಪ್ ವರೆಗೂ ಅವರಿಗೆ ಜವಾಬ್ಧಾರಿ ನೀಡಲಾಗುತ್ತದೆ. ಅನಿಲ್ ಕುಂಬ್ಳೆ ತರಬೇತಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಹಾಗಾಗಿ ಅವರನ್ನು ಹುದ್ದೆಯಿಂದ ತೆಗೆದು ಹಾಕುವುದು ಬೇಡ ಅಂತಾ ಸಿಎಸಿ ಅಭಿಪ್ರಾಯಪಟ್ಟಿದೆ ಎನ್ನಲಾಗ್ತಿದೆ. ಆದ್ರೆ ಕುಂಬ್ಳೆ ಹಾಗೂ ವಿರಾಟ್ ಮಧ್ಯೆ ಭಿನ್ನಾಭಿಪ್ರಾಯವಿರೋದ್ರಿಂದ ನಾಯಕನ ಮಾತನ್ನು ಕೂಡ ಬಿಸಿಸಿಐ ತೆಗೆದುಹಾಕುವಂತಿಲ್ಲ.
ಕುಂಬ್ಳೆ ಜೊತೆಗೆ ಕೆಲಸ ಮಾಡಲು ಸಾಧ್ಯವಿಲ್ಲ ಅಂತಾ ಖುದ್ದು ಕೊಹ್ಲಿ ಬಿಸಿಸಿಐ ಬಳಿ ಹೇಳಿಲ್ಲ ಎನ್ನಲಾಗ್ತಾ ಇದೆ. ಕುಂಬ್ಳೆ ಬದಲು ಬೇರೊಬ್ಬರನ್ನು ನೇಮಕ ಮಾಡಿದ್ರೂ ಕೋಚ್ ಹಾಗೂ ನಾಯಕನ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆ ಇದೆ. ಹಾಗಾಗಿ ಕೊಹ್ಲಿ ಹಾಗೂ ಕುಂಬ್ಳೆ ಮಧ್ಯೆ ಸಂಧಾನ ಮಾಡಿಸಿ, ಕುಂಬ್ಳೆಯನ್ನೇ ಕೋಚ್ ಹುದ್ದೆಯಲ್ಲಿ ಮುಂದುವರಿಸುವ ಸಾಧ್ಯತೆಗಳು ಅಧಿಕವಾಗಿವೆ.
Comments