ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೆಸರು ಅಂತಿಮ: ಬಿಎಸ್ವೈ-ಹೊರಟ್ಟಿ ಭೇಟಿ

ವಿಧಾನ ಪರಿಷತ್ ಸಭಾಪತಿ ಸ್ಥಾನ ಕೇಳಿದ್ದೆವು. ಈ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿರುವುದಾಗಿ ಜೆಡಿಎಸ್ ಎಂಎಲ್ ಸಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಸಭಾಪತಿ ಮತ್ತು ಉಪ ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಸುದೀರ್ಘ ಕಾಲ ಸಭೆ ನಡೆಯಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಎಸ್.ಎಲ್. ಭೋಜೇಗೌಡ, ಅಪ್ಪಾಜಿಗೌಡ, ಕಾಂತರಾಜ್, ಗೋವಿಂದರಾಜ್, ರಮೇಶ್ ಗೌಡ ಮತ್ತು ತಿಪ್ಪೇಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭಾಪತಿ ಸ್ಥಾನವನ್ನು ಪಡೆಯುವ ಕುರಿತು ದೇವೇಗೌಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಹೊರಟ್ಟಿ ಅವರನ್ನು ಸಭಾಪತಿ ಹುದ್ದೆಗೆ ಆಯ್ಕೆಮಾಡುವ ಪ್ರಸ್ತಾವವನ್ನೂ ಸಭೆಯ ಮುಂದಿಟ್ಟರು. ಎಲ್ಲ ಸದಸ್ಯರೂ ಸಹಮತ ಸೂಚಿಸಿದ್ದು, ಉಪ ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Comments