ಹಿಂದಿ ರಾಜಕಾರಣ ದಕ್ಷಿಣ ಭಾರತೀಯರ ಅವಕಾಶ ಕಸಿಯುತ್ತಿದೆ: ಎಚ್ ಡಿಕೆ ಆಕ್ರೋಶ

ಭಾಷೆ ಕಾರಣಕ್ಕೆ ಡಿಎಂಕೆ ಸಂಸದೆ ಕನಿಮೊಳಿ ಅವರನ್ನು 'ನೀವು ಭಾರತೀಯರೇ' ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸಂಸದೆ ಕನ್ನಿಮೋಳಿ ಅವರಿಗೆ, ವಿಮಾನ ನಿಲ್ದಾಣದಲ್ಲಿ ಹಿಂದಿ ಮಾತನಾಡಲು ಬಾರದಿದ್ದ ಕಾರಣ CISF ಅಧಿಕಾರಿಯೊಬ್ಬರು ನೀವು ಭಾರತೀಯರೇ ಎಂದು ಪ್ರಶ್ನಿಸಿದ್ದಾರೆಂದು ಕನ್ನಮೋಳಿ ಹಿಂದಿ ಹೇರಿಕೆ ಕುರಿತಂತೆ ತಮಗಾಗಿರುವ ಅನುಭವವನ್ನು ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರೂ ಸೇರಿದಂತೆ ಅನೇಕ ಮಂದಿ ಹಿಂದಿನ ಹೇರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಅವರು, 'ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಕೇಂದ್ರ ಸರ್ಕಾರ ಬಾಯಿ ಮಾತಿಗಷ್ಟೇ ಹೇಳುತ್ತದೆ. ಆದರೆ, ಹಿಂದಿ ಅಭಿವೃದ್ಧಿಗಾಗಿ ದೇಶ, ವಿದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಕೋಟ್ಯಂತರ ಮೊತ್ತ ವಿನಿಯೋಗಿಸುತ್ತದೆ. ಇದು ರಹಸ್ಯ ಕಾರ್ಯಸೂಚಿಗಳಲ್ಲೊಂದು. ಪ್ರಾಮಾಣಿಕ ಭಾಷಾಭಿಮಾನದಿಂದ ಮಾತ್ರ ಇವುಗಳನ್ನು ಮೆಟ್ಟಿಸಲು ಸಾಧ್ಯ ಎಂದು ಹೇಳಿದ್ದಾರೆ.
Comments