ರಾಜ್ಯ ರಾಜಕೀಯದಲ್ಲಿ ಮೆಗಾ ಟ್ವಿಸ್ಟ್: ರಾಜೀನಾಮೆ ಹಿಂಪಡೆಯಲು ಮುಂದಾದ ಕೈ ಶಾಸಕ..!?

ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕುರಿತಂತೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ದೋಸ್ತಿಯ ಅತೃಪ್ತ ಶಾಸಕರ ರಾಜೀನಾಮೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ಮಹತ್ತರ ತೀರ್ಪನ್ನು ಹೊರಡಿಸಿದೆ. ತೀರ್ಪು ಹೊರಬಂದ ಮೇಲೆ ಮತ್ತೊಂದು ರೀತಿಯ ಬದಲಾವಣೆಗಳು ಕಾಣಿಸುತ್ತಿವೆ.,. ಸುಪ್ರೀಂ ಕೋರ್ಟ್ ಸ್ಪೀಕರ್ ನ ಪರಮಾಧಿಕಾರವನ್ನು ಎತ್ತಿ ಹಿಡಿದಿದೆ.. ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ತಮ್ಮ ನಿರ್ಧಾರ ಬದಲಿಸಿದ್ದಾರೆಂದು ಹೇಳಲಾಗಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ರಾಮಲಿಂಗಾರೆಡ್ಡಿ ರಾಜೀನಾಮೆಯನ್ನು ಹಿಂಪಡೆಯುವ ಕುರಿತು ಸುಳಿವು ನೀಡಿದ್ದು, ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುತ್ತೇನೆ. ನಾಳೆ ನಡೆಯುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರುತ್ತೇನೆ ಎಂದು ತಿಳಿಸಿದ್ದಾರೆ. ರಾಜೀನಾಮೆ ಹಿಂಪಡೆಯುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರಾಮಲಿಂಗಾ ರೆಡ್ಡಿ, ತಾವು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಅದು ಸ್ಪೀಕರ್ ಬಳಿ ಇದೆ. ರಾಜೀನಾಮೆ ಕುರಿತು ನಿಮ್ಮ ಬಳಿ ಮಾತನಾಡಿದರೆ ಅವರಿಗೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ರಾಜೀನಾಮೆ ಹಿಂಪಡೆಯುವ ಎಲ್ಲಾ ಸಾಧ್ಯತೆಗಳು ಇವೆ ಎಂಬ ಮಾತು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ನಾಳೆ ನಡೆಯುವ ವಿಶ್ವಾಸ ಮತಯಾಚನೆಯ ಸಮಯದ ಮೇಲೆ ರಾಜ್ಯ ರಾಜಕೀಯ ನಿಂತಿದೆ.. ದೋಸ್ತಿಗಳೇ ಸರ್ಕಾರವನ್ನು ಮುಂದುವರೆಸುತ್ತಾರೋ ಅಥವಾ ಬಿಜೆಪಿ ಮುಂದುವರೆಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Comments