ಸಿಎಂ ಕುಮಾರಸ್ವಾಮಿ ಸಚಿವ ಸಂಪುಟಕ್ಕೆ ಸೇರಿಕೊಳ್ಳುತ್ತಿರುವವರು ಇವರೇನಾ..?

ಲೋಕಸಮರದ ಫಲಿತಾಂಶ ಹೊರ ಬಂದ ಮೇಲೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.. ಒಂದು ಕಡೆ ಬಿಜೆಪಿಯವರು ಆಪರೇಷನ್ ಕಮಲವನ್ನು ಶುರು ಮಾಡಿಕೊಂಡಿದ್ದಾರೆ, ಮತ್ತೊಂದು ಕಡೆ ದೋಸ್ತಿ ಸರ್ಕಾರ ಎಲ್ಲಿ ಬಿದ್ದು ಬಿಡುತ್ತದೆಯೋ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ನಾಯಕರು, ಅತೃಪ್ತ ಶಾಸಕರ ಮನವೊಲಿಸುವ ಸಲುವಾಗಿ ಅವರುಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಡಲು ಇದೀಗ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬುಧವಾರದಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದ್ದು, ಮೊದಲ ಹಂತದಲ್ಲಿ ಬಿ.ಸಿ. ಪಾಟೀಲ್, ಡಾ. ಕೆ. ಸುಧಾಕರ್, ರೋಷನ್ ಬೇಗ್ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಮುಂದಿನ ಹಂತದಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕರಿಂದ ಐದು ಸಚಿವರಿಗೆ ಕೊಕ್ ಕೊಟ್ಟು ಮತ್ತಷ್ಟು ಶಾಸಕರಿಗೆ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ. ಜೊತೆಗೆ ನಿಗಮ-ಮಂಡಳಿಗಳಿಗೂ ಶಾಸಕರನ್ನು ನೇಮಕ ಮಾಡುವ ಮೂಲಕ ಭಿನ್ನಮತ ಶಮನಕ್ಕೆ ದೋಸ್ತಿ ನಾಯಕರು ಮುಂದಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.. ಒಟ್ಟಾರೆಯಾಗಿ ಲೋಕಸಮರದ ಫಲಿತಾಂಶದ ಬೆನ್ನಲೆ ಮೈತ್ರಿ ಸರ್ಕಾರವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
Comments